Thursday, July 29, 2021
Homeಅಂತರ್ ರಾಜ್ಯಯಾರಿಗೂ ಗೊತ್ತಾಗದಂತೆ 10 ವರ್ಷ ಪ್ರೇಯಸಿಯನ್ನು ಬಚ್ಚಿಟ್ಟಿದ್ದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

ಇದೀಗ ಬಂದ ಸುದ್ದಿ

ಯಾರಿಗೂ ಗೊತ್ತಾಗದಂತೆ 10 ವರ್ಷ ಪ್ರೇಯಸಿಯನ್ನು ಬಚ್ಚಿಟ್ಟಿದ್ದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

ಪಲಕ್ಕಾಡ್​: ಯಾರಿಗೂ ಗೊತ್ತಾಗದಂತೆ 10 ವರ್ಷಗಳ ಕಾಲ ಪ್ರೇಯಸಿಯನ್ನು ತನ್ನ ಮನೆಯ ಒಂಟಿ ಕೋಣೆಯಲ್ಲಿ ಪ್ರಿಯಕರ ಬಚ್ಚಿಟ್ಟಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ರೆಹಮಾನ್​ ಎಂಬಾತ ತನ್ನ ಪ್ರೇಯಸಿ ಸಾಜಿತಾ ಎಂಬಾಕೆಯನ್ನು 10 ವರ್ಷಗಳ ಕಾಲ ಬಚ್ಚಿಟ್ಟಿದ್ದ ಎಂಬ ಸುದ್ದಿ ದೇಶಾದ್ಯಂತ ಸದ್ದು ಮಾಡಿದೆ. ನಿನ್ನೆಯಷ್ಟೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ರೆಹಮಾನ್​, ಪೊಲೀಸರು ಮತ್ತು ಸ್ಥಳೀಯ ಜನರು ನೆರವು ನೀಡಿದ್ದರು ಎಂದಿದ್ದ. ಆದರೆ, 10 ವರ್ಷಗಳ ಕಾಲ ಬಚ್ಚಿಡಲು ಸಾಧ್ಯವೇ ಇಲ್ಲ ಎಂದು ರೆಹಮಾನ್​ ತಂದೆ ಮುಹಮ್ಮದ್​ ಕನಿ, ಇಡೀ ಪ್ರಕರಣವನ್ನು ತಳ್ಳಿ ಹಾಕಿದ್ದಾರೆ.

ಒಂದೇ ರೂಮಿನಲ್ಲಿ ಹತ್ತು ವರ್ಷಗಳ ಕಾಲ ಯಾರಿಗೂ ಗೊತ್ತಾಗದಂತೆ ಬಚ್ಚಿಡುವುದು ಸಾಧ್ಯವೇ ಇಲ್ಲ ಎಂದಿದ್ದಾರೆ. ನನ್ನ ಮಗ ಕೋಣೆಯಲ್ಲಿ 10 ವರ್ಷ ಮಹಿಳೆಯೊಬ್ಬಳನ್ನು ಬಚ್ಚಿಟ್ಟಿದ್ದ ಎಂಬುದನ್ನು ನಂಬಲು ನನ್ನಿಂದ ಸಾಧ್ಯವಿಲ್ಲ. ಈ ಬಗ್ಗೆ ನಮ್ಮ ಕುಟುಂಬದ ಯಾರೊಬ್ಬರಿಗೂ ಒಂದು ಸುಳಿವು ಸಹ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಮಗನೇ ಸುಳ್ಳು ಕತೆಯನ್ನು ಹೆಣೆದಿದ್ದಾನೆ. ಸಣ್ಣ ಕೋಣೆಯಲ್ಲಿ ಯುವತಿಯನ್ನು 10 ವರ್ಷಗಳ ಕಾಲ ಬಚ್ಚಿಡುವುದು ಸಾಧ್ಯವೇ ಇಲ್ಲ. ಆಕೆಯ ಧ್ವನಿ ಅಥವಾ ಸೀನುವುದಾದರೂ ಕೇಳಬೇಕಿತ್ತು. ಬಹುಶಃ ಬೇರೆ ಜಾಗದಲ್ಲಿ ಬಚ್ಚಿಟ್ಟಿದ್ದ ಎಂಬ ಶಂಕೆ ಇದೆ ಎಂದಿದ್ದಾರೆ.

ಯುವತಿ ಕೋಣೆಯಲ್ಲಿರುವ ಬಗ್ಗೆ ಒಂದು ಸಣ್ಣ ಸುಳಿವು ದೊರೆತಿದ್ದರೂ ಸಹ ಆ ಬಗ್ಗೆ ಸಂಬಂಧಿಕರಿಗಾಗಲಿ ಅಥವಾ ಅಧಿಕಾರಿಗಳಿಗಾಲಿ ತಿಳಿಸುತ್ತಿದ್ದೆವು. ಪ್ರಕರಣವನ್ನು ನಾವೇ ಬಗೆಹರಿಸಿಕೊಳ್ಳುತ್ತಿದ್ದೆವು. ಯುವತಿ ಕಾಣೆಯಾದಾಗ ಪೊಲೀಸರು ರೆಹಮಾನ್​ನನ್ನೂ ವಿಚಾರಣೆ ಮಾಡಿದ್ದರು. ಆಕೆಯ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದ. ತಾಯಿ ಕೇಳಿದಾಗಲೂ ಅದನ್ನೇ ಹೇಳಿದ್ದ. ಇಬ್ಬರು ಸಂಬಂಧದಲ್ಲಿದ್ದಾರೆ ಎಂಬ ಯಾವು ಸಂಶಯವು ಇರಲಿಲ್ಲ. ಕೆಲಸಕ್ಕೆ ಹೋಗದೆ ಮನೆಯಲ್ಲೇ ಸಮಯ ಕಳೆಯುತ್ತಿದ್ದ. ಯಾವಾಗಲೂ ತನ್ನ ಆರೋಗ್ಯದ ಸಮಸ್ಯೆಯನ್ನೇ ಹೇಳಿಕೊಳ್ಳುತ್ತಿದ್ದ. ಆದರೆ, ಆತನ ಆರೋಗ್ಯವಾಗಿರುವುದಾಗಿ ವೈದ್ಯರು ಹೇಳುತ್ತಿದ್ದರು. ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದಾಗ ನಿರಾಕರಿಸುತ್ತಿದ್ದ. ಮಾನಸಿಕ ಸಮಸ್ಯೆ ಇರಬಹುದೆಂದು ಅಂದುಕೊಂಡಿದ್ದೆವು. ಅಗತ್ಯ ವೈದ್ಯಕೀಯ ನೆರವು ಕೊಡಿಸುವ ಪ್ರಯತ್ನವು ನಡೆದಿತ್ತು ಎಂದು ರೆಹಮಾನ್​ ತಂದೆ ಮುಹಮ್ಮದ್​ ಮಾಹಿತಿ ನೀಡಿದ್ದಾರೆ.

ಸಾಜಿತ 10 ವರ್ಷಗಳಿಂದ ಮನೆಯಲ್ಲೇ ಇದ್ದಳು ಎಂದು ರೆಹಮಾನ್​ ಖಂಡಿತವಾಗಿ ಕತೆ ಕಟ್ಟಿದ್ದಾನೆಂದು ಮುಹಮ್ಮದ್​ ಹೇಳಿದರು. ನಾವೇನು ಹೆಚ್ಚಿನ ಅಡುಗೆ ಮಾಡುತ್ತಿರಲಿಲ್ಲ. ರೆಹಮಾನ್​ ತನ್ನ ಕೋಣೆಯಲ್ಲಿ ಊಟ ಮಾಡುತ್ತಿರಲಿಲ್ಲ. ಊಟ ಮಾಡಿದ ಬಳಿಕ ಆತನೇ ಪ್ಲೇಟ್​ಗಳನ್ನು ತೊಳೆಯುತ್ತಿದ್ದ. ಆತ ತಮಿಳುನಾಡಿಗೆ ಹೋದಾಗ ಸಾಜಿತಾ ಹೇಗೆ ಊಟ ಪಡೆದುಕೊಳ್ಳುತ್ತಿದ್ದಳು? ಬ್ರೆಡ್​ ಇಟ್ಟಿದ್ದೆ ಎಂದು ರೆಹಮಾನ್​ ಹೇಳುವ ಮಾತು ಸುಳ್ಳು. ಬಹುಶಃ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಬಚ್ಚಿಟ್ಟಿದ್ದ ಎಂಬ ಬಗ್ಗೆ ನಮಗೆ ಸಂಶಯವಿದೆ ಎಂದಿದ್ದಾರೆ.

ರೆಹಮಾನ್​ ಕೇವಲ ಇಬ್ಬರು ಸ್ನೇಹಿತರನ್ನು ಹೊಂದಿದ್ದ. ಯಾರೊಂದಿಗೂ ಬಲವಾದ ಸ್ನೇಹ ಹೊಂದಿರಲಿಲ್ಲ. ನಾಳೆ ನಮ್ಮ ಮನೆಗೆ ಮಹಿಳಾ ಆಯೋಗದವರು ಬರುತ್ತಾರೆಂದು ಕೇಳ್ಪಟ್ಟಿದ್ದೇವೆ. ಏನು ಹೇಳಬೇಕು ಗೊತ್ತಾಗುತ್ತಿಲ್ಲ. ನಾವೇ ಆಘಾತದಲ್ಲಿದ್ದೇವೆ. ಒಂದು ವೇಳೆ ಯುವತಿ 10 ವರ್ಷ ಕೋಣೆಯೊಳಗೆ ಇದ್ದಳು ಎಂದರೆ ನಿಜಕ್ಕೂ ಅದು ಅಸಮಾನ್ಯ. ಮಾರ್ಚ್​ನಲ್ಲಿ ಯಾರಿಗೂ ಹೇಳದೆ ರೆಹಮಾನ್​ ಮನೆ ಬಿಟ್ಟಿದ್ದ. ಈ ಸಮಯದಲ್ಲಿ ಯಾರೂ ಸಹ ನಮ್ಮ ಮನೆಯಲ್ಲಿ ಇರಲಿಲ್ಲ. ನಮ್ಮ ಮನೆಯಲ್ಲಿ ವಾಸವಾಗಿದ್ದಾಗ ಆ ಹುಡುಗಿಗೆ ಏನಾದರೂ ದುರದೃಷ್ಟಕರ ಸಂಭವಿಸಿದ್ದರೆ, ಆಕೆಯ ಜೀವಕ್ಕೆ ಅಪಾಯವಿದೆ ಎಂದು ಎಲ್ಲರೂ ನಮ್ಮನ್ನು ದೂಷಿಸುತ್ತಿದ್ದರು ಎಂದು ಮುಹಮ್ಮದ್​ ಕನಿ ಬೇಸರ ವ್ಯಕ್ತಪಡಿಸಿದರು.

ಘಟನೆಯ ಹಿನ್ನೆಲೆ
ಕೇರಳದ ಪಾಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದಲ್ಲಿ 2010ರ ಫೆಬ್ರವರಿ 2ರಂದು 19 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದಳು. ಮಗಳಿಗಾಗಿ ಈಕೆಯ ಪಾಲಕರು ಹುಡುಕಿದ ಜಾಗವಿಲ್ಲ. ಪೊಲೀಸ್​ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸ್​ ಕೂಡ ದಾಖಲಾಗಿತ್ತು. ಪೊಲೀಸರು ಹುಡುಕಾಡಿದರೂ ಪತ್ತೆಯಾಗಲಿಲ್ಲ.

ಆದರೆ, ಆ ಯುವತಿ ಅದೇ ಗ್ರಾಮದ ತನ್ನ ಪ್ರಿಯಕರನ ಮನೆಯಲ್ಲೇ ಇದ್ದಳು. ಅಂದು ನಾಪತ್ತೆಯಾಗಿದ್ದ ಯುವತಿಯನ್ನ ಪ್ರಿಯಕರ ತನ್ನ ಮನೆಯ ಕೋಣೆಯೊಂದರಲ್ಲಿ ಅಡಗಿಸಿಟ್ಟಿದ್ದ. ಯುವತಿ ಮತ್ತು ಯುವಕನ ಮನೆ ಕೇವಲ 100 ಮೀಟರ್​ ಅಂತರದಲ್ಲಿದ್ದರೂ ಯಾರೊಬ್ಬರಿಗೂ 10 ವರ್ಷ ಕಾಲ ಗೊತ್ತೇ ಆಗಿಲ್ಲ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಕೋಣೆಯ ಕಿಟಕಿ ಮೂಲಕ ಯುವತಿಯನ್ನ ಸ್ನಾನಗೃಹ, ಶೌಚಗೃಹಕ್ಕೆ ಕರೆದೊಯ್ಯುತ್ತಿದ್ದ. ತಾನು ಕೋಣೆಯಲ್ಲೇ ಊಟ ಮಾಡುವೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವ ತನ್ನ ಪ್ರೇಯಸಿಗೆ ಕೊಡುತ್ತಿದ್ದ. ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಏಕೆ? ಏನು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಮನೆಯವರೂ ಅವನತ್ತ ಹೆಚ್ಚು ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದವ ಬೇಗ ಮನೆಗೆ ಬಂದು ಕೋಣೆ ಸೇರಿಕೊಳ್ಳುತ್ತಿದ್ದ. ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿದ್ದ. ಹೀಗೆ ರಹಸ್ಯ ಕೋಣೆಯಲ್ಲಿ ನಡೆಯುತ್ತಿದ್ದ ಇವರಿಬ್ಬರ ಪ್ರೇಮ್​ಕಹಾನಿ ಬಯಲಾಗಿದ್ದೇ ರೋಚಕ.

ಮೂರು ತಿಂಗಳ ಹಿಂದಷ್ಟೆ ಯುವಕ ನಾಪತ್ತೆಯಾಗಿದ್ದ. ಆತಂಕಗೊಂಡ ಪಾಲಕರು ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ಇತ್ತೀಚಿಗೆ ಯುವಕ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಪೊಲೀಸರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಗೊತ್ತಾಯ್ತು ಪ್ರೇಯಸಿಯನ್ನ ದಶಕ ಕಾಲ ರಹಸ್ಯವಾಗಿ ಕೋಣೆಯಲ್ಲೇ ಇಟ್ಟದ್ದು ಏಕೆಂದು.

ಒಂದೇ ಗ್ರಾಮದ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಲು ಜಾತಿ ಅಡ್ಡ ಬರಲಿದೆ, ಮನೆಯವರು ಒಪ್ಪುವುದಿಲ್ಲ. ಎಲ್ಲಿಯಾದರೂ ಓಡಿಹೋಗೋಣ ಅಂದ್ರೆ ಹಣವಿಲ್ಲ ಎಂದು ಯೋಚಿಸಿದ ಪ್ರೇಮಿಗಳು ರಹಸ್ಯ ಕೋಣೆಯಲ್ಲೇ ಬಚ್ಚಿಟ್ಟುಕೊಂಡು ಲವ್​ ಕಹಾನಿ ಮುಂದುವರಿಸಿದ್ದರಂತೆ. ಇತ್ತೀಚಿಗೆ ರಾತ್ರಿ ವೇಳೆ ಆಕೆಯನ್ನ ಮನೆಯಿಂದ ಹೊರ ಕರೆದೊಯ್ದು ಮದುವೆ ಮಾಡಿಕೊಂಡು ವಿಥಾನಸ್ಸೆರಿ ಗ್ರಾಮದಲ್ಲಿ ವಾಸವಿದ್ದ. ಇನ್ನು ರಹಸ್ಯ ಕೋಣೆಯ ಕಿಟಕಿ ಮೂಲಕ ಯುವತಿ ತನ್ನ ತಂದೆ-ತಾಯಿಯನ್ನ ಎರಡ್ಮೂರು ಬಾರಿ ನೋಡಿದ್ದರೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲವಂತೆ. ಇವರಿಬ್ಬರ ಪ್ರೇಮ್​ ಕಹಾನಿ ಕೇಳಿದ ಪೊಲೀಸರು ಅರೆಕ್ಷಣ ದಂಗಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img