Sunday, June 13, 2021
Homeಸುದ್ದಿ ಜಾಲಏಳು ವರ್ಷಗಳಲ್ಲಿ ಹಲವು ಹೆಮ್ಮೆಯ ಕ್ಷಣಗಳನ್ನು ದೇಶ ಅನುಭವಿಸಿದೆ: ಪ್ರಧಾನಿ ನರೇಂದ್ರ ಮೋದಿ

ಇದೀಗ ಬಂದ ಸುದ್ದಿ

ಏಳು ವರ್ಷಗಳಲ್ಲಿ ಹಲವು ಹೆಮ್ಮೆಯ ಕ್ಷಣಗಳನ್ನು ದೇಶ ಅನುಭವಿಸಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ‘ನಮ್ಮ ಸರ್ಕಾರದ ಅವಧಿಯಲ್ಲಿ ದೇಶ ಹಲವಾರು ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದೆ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ನೇತೃತ್ವದ ಸರ್ಕಾರದ ಏಳನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮೆಲುಕು ಹಾಕಿದರು.

ತಮ್ಮ ಮಾಸಿಕ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಅವರು, ‘ಈ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಯಶಸ್ಸಿನ ಪ್ರಯೋಗಗಳೂ ನಡೆದಿವೆ. ಜತೆಗೆ ಸಾಂಕ್ರಾಮಿಕ ಪಿಡುಗು ದೇಶದ ಜನರ ಜೀವನಕ್ಕೆ ತೀವ್ರ ಹಾನಿ ಮಾಡಿ, ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ’ ಎಂದರು.

ಭಾರತವು ಈ ಪಿಡುಗಿನ ವಿರುದ್ಧ ಮೇಲುಗೈ ಸಾಧಿಸುತ್ತದೆ ಎಂಬ ವಿಶ್ವಾಸವನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದರು.

ಈ ಏಳು ವರ್ಷಗಳ ಅವಧಿಯಲ್ಲಿ ಭಾರತವು ‘ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌, ಸಬ್ಕಾ ವಿಶ್ವಾಸ್‌’ ಎಂಬ ಮಂತ್ರಗಳನ್ನು ಅನುಸರಿಸಿಯೇ ನಡೆದಿದೆ. ಭಾರತ ತನ್ನದೇ ಆದ ನಂಬಿಕೆಗಳೊಂದಿಗೆ ಜಗತ್ತಿಗೇ ಹೆಮ್ಮೆ ತರುತ್ತಿದೆ ಎಂದು ಅವರು ಹೇಳಿದರು.

‘ನಮ್ಮ ವಿರುದ್ಧ ಪಿತೂರಿ ಮಾಡುವವರಿಗೆ ಭಾರತ ಸೂಕ್ತ ಉತ್ತರ ನೀಡುತ್ತದೆ ಎಂಬುದಕ್ಕೆ ನಾವು ಸಾಕ್ಷಿಯಾದಾಗ, ನಮ್ಮ ವಿಶ್ವಾಸ ಹೆಚ್ಚುತ್ತದೆ. ಹಾಗೆಯೇ ರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ಭಾರತ ರಾಜಿ ಮಾಡಿಕೊಳ್ಳದಿದ್ದಾಗ, ನಮ್ಮ ಸಶಸ್ತ್ರ ಪಡೆಗಳ ಬಲ ಹೆಚ್ಚಾಗುತ್ತದೆ. ಆಗ ನಮಗೆ ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಅನಿಸುತ್ತದೆ’ ಎಂದು ಮೋದಿ ತಿಳಿದರು.

ಈ ಅವಧಿಯಲ್ಲಿ ದೇಶದ ಹಲವು ಹಳೆಯ ವಿವಾದಗಳು ಶಾಂತಿ ಮತ್ತು ಸೌಹಾರ್ದದಿಂದ ಪೂರ್ಣವಾಗಿ ಬಗೆಹರಿದಿವೆ. ಈಶಾನ್ಯ ಭಾರತದಿಂದ ಕಾಶ್ಮೀರದವರೆಗೂ ಶಾಂತಿ ಮತ್ತು ಅಭಿವೃದ್ಧಿಯು ಹೊಸ ವಿಶ್ವಾಸವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ನಂತರದ ಏಳು ದಶಕಗಳಲ್ಲಿ ಕೇವಲ 3.5 ಕೋಟಿ ಗ್ರಾಮೀಣ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ 21 ತಿಂಗಳಲ್ಲಿ 4.5 ಕೋಟಿ ಗ್ರಾಮೀಣ ಮನೆಗಳಿಗೆ ಶುದ್ಧ ನೀರಿನ ಸಂಪರ್ಕ ನೀಡಲಾಗಿದೆ ಎಂದರು.

ಬಡವರಿಗೆ ಉಚಿತ ಚಿಕಿತ್ಸೆ ಒದಗಿಸಲು ‘ಆಯುಷ್ಮಾನ್‌ ಯೋಜನೆ’ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅನೇಕ ಗ್ರಾಮಗಳು ಮೊದಲ ಬಾರಿಗೆ ವಿದ್ಯುತ್‌ ಸಂಪರ್ಕ ಪಡೆದಿವೆ. ಸುಸಜ್ಜಿತ ರಸ್ತೆಯ ಮೂಲಕ ಗ್ರಾಮಗಳನ್ನು ನಗರಕ್ಕೆ ಸಂಪರ್ಕಿಸಲಾಗಿದೆ. ಈ ಯೋಜನೆಗಳ ಫಲಾನುಭವಿಗಳು ಅದರ ಅನುಕೂಲಗಳ ಬಗ್ಗೆ ನನಗೆ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳಿಗೆ ಮನೆ ನಿರ್ಮಿಸಿಕೊಂಡ ಹಲವು ಫಲಾನುಭವಿಗಳು ತಮ್ಮ ಮನೆ ಗೃಹ ಪ್ರವೇಶಕ್ಕೆ ಆಹ್ವಾನ ಪತ್ರಿಕೆಗಳನ್ನು ನನಗೆ ಕಳುಹಿಸುತ್ತಿದ್ದಾರೆ ಎಂದು ಅವರು ನೆನಪಿಸಿಕೊಂಡರು.

ಈ ಏಳು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವಕ್ಕೆ ಡಿಜಿಟಲ್‌ ವಹಿವಾಟಿನ ಹೊಸ ದಿಕ್ಕನ್ನು ತೋರಿಸಿದೆ. ಅಲ್ಲದೆ ಹಲವು ಉಪಗ್ರಹಗಳನ್ನು ಉಡಾಯಿಸಿದೆ. ಹೊಸ ರಸ್ತೆಗಳನ್ನು ನಿರ್ಮಿಸಿ ದಾಖಲೆಗಳನ್ನು ಬರೆದಿದೆ ಎಂದರು.

‘ಕೊರೊನಾ ಪಿಡುಗು ನಮ್ಮನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸುತ್ತಿದೆ. ಇಡೀ ಜಗತ್ತನ್ನು ಕಾಡುತ್ತಿರುವ ಈ ಪಿಡುಗಿಗೆ ಎಷ್ಟೋ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಇದರ ನಡುವೆಯೂ ಭಾರತ ಸೇವೆ ಮತ್ತು ಸಹಕಾರದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಕೊರೊನಾ ಮೊದಲ ಅಲೆಯನ್ನು ಧೈರ್ಯವಾಗಿ ಹೋರಾಡಿದ ನಾವು, ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿಯೂ ಜಯಶಾಲಿಯಾಗುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img