Tuesday, May 11, 2021
Homeಸುದ್ದಿ ಜಾಲಬೀದರ್; ನಗರದಲ್ಲಿ ದಿಢೀರ್ ಲಾಕ್ ಡೌನ್

ಇದೀಗ ಬಂದ ಸುದ್ದಿ

ಬೀದರ್; ನಗರದಲ್ಲಿ ದಿಢೀರ್ ಲಾಕ್ ಡೌನ್

 ಬೀದರ್, ಏ. 22; ಬೀದರ್ ನಗರದಲ್ಲಿ ದಿಢೀರ್ ಲಾಕ್‌ಡೌನ್‌ಗೆ ಜಿಲ್ಲಾಡಳಿತ ಮುಂದಾಗಿದ್ದು, ವ್ಯಾಪಾರಿಗಳು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಪೊಲೀಸರು ಅಂಗಡಿಗಳನ್ನು ಮುಚ್ಚಿಸುತ್ತಿದ್ದು, ಜಿಲ್ಲಾಡಳಿತದ ವಿರುದ್ಧ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶದ ಅನ್ವಯ ರಾತ್ರಿ 9 ರಿಂದ ಬೆಳಗ್ಗೆ 6ರ ತನಕ ರಾತ್ರಿ ಕರ್ಫ್ಯೂ ಮತ್ತು ಶನಿವಾರ ಮತ್ತು ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಬೇಕು. ಆದರೆ, ಗುರುವಾರ ಮಧ್ಯಾಹ್ನ 12 ಗಂಟೆಗೆ ಪೊಲೀಸರು ವಾಹನಗಳಲ್ಲಿ ರಸ್ತೆಗಿಳಿದು ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ದಿನಸಿ ಅಂಗಡಿಗಳು ಹೊರತುಪಡಿಸಿ ಎಲ್ಲಾ ಅಂಗಡಿಗಳಿಗೆ ಬೀಗ ಹಾಕುವಂತೆ ತಾಕೀತು ಮಾಡಿದ್ದಾರೆ. ನಗರದ ಅಂಬೇಡ್ಕರ್ ವೃತದಿಂದ ಗವಾನ್ ಚೌಕ್‌ವರೆಗಿನ ರಸ್ತೆ ಮಾರ್ಗದಲ್ಲಿದ್ದ ಅಂಗಡಿಗಳು ಕ್ಷಣಾರ್ಧದಲ್ಲಿ ಬಂದ್ ಮಾಡಲಾಗಿದೆ.

ಮೇಲಿನಿಂದ ಆದೇಶ ಬಂದಿದೆ ಅಂಗಡಿ ಬಂದ್ ಮಾಡುವಂತೆ ಪೊಲೀಸರು ಆದೇಶಿಸಿದ್ದಾರೆ. ಆದೇಶ ಪಾಲಿಸದೇ ಬೇರೆ ವಿಧಿಯಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಣ್ಣ-ಸಣ್ಣ ವ್ಯಾಪಾರಿಗಳು ಈಗಷ್ಟೇ ಅಂಗಡಿ ತೆರೆದಿದ್ದು, ದಿಢೀರನೇ ಬಂದ್ ಮಾಡುವಂತೆ ಸೂಚಿಸಿದರಿಂದ ದಿಕ್ಕು ತೋಚದಂತಾಗಿದ್ದಾರೆ.

ಜಿಲ್ಲಾಡಳಿತ ಯಾವುದೇ ಮುನ್ಸೂಚನೆ ನೀಡದೇ ಹೀಗೆ ಏಕಾಏಕಿ ಅಂಗಡಿ ಮುಚ್ಚಿಸುತ್ತಿರುವುದರಿಂದ ಜನರು ಸಹ ಕಂಗಾಲಾಗಿದ್ದು, ಏನು ಮಾಡಬೇಕು ಎಂಬುದೇ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದರ್‌ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರದ ವರದಿಯಂತೆ 202 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 14,322ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,822.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img