Tuesday, May 18, 2021
Homeಅಂತರ್ ರಾಜ್ಯಕೊರೊನಾ ಕಾರ್ಯಾಚರಣೆಗೆ ರಸ್ತೆಗಿಳಿದ ಗರ್ಭಿಣಿ ಡಿಎಸ್‌ಪಿ

ಇದೀಗ ಬಂದ ಸುದ್ದಿ

ಕೊರೊನಾ ಕಾರ್ಯಾಚರಣೆಗೆ ರಸ್ತೆಗಿಳಿದ ಗರ್ಭಿಣಿ ಡಿಎಸ್‌ಪಿ

ರಾಯ್‌ಪುರ, ಏ.21: ಎಲ್ಲಕ್ಕಿಂತ ಕರ್ತವ್ಯ ಮೊದಲು ಎಂಬುದನ್ನು ಛತ್ತೀಸ್‌ಗಡದ ದಂತೇವಾಡ ಜಿಲ್ಲೆಯ ಈ ಮಹಿಳಾ ಡಿಎಸ್‌ಪಿ ತೋರಿಸಿಕೊಟ್ಟಿದ್ದು, ಅವರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾವು ಐದು ತಿಂಗಳ ಗರ್ಭಿಣಿಯಾಗಿದ್ದರೂ, ಕೊರೊನಾ ಪರಿಸ್ಥಿತಿ ನಿರ್ವಹಣೆಗೆ ಹಾಗೂ ಜನರಲ್ಲಿ ಕೊರೊನಾ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಅವರು ರಸ್ತೆಗಿಳಿದಿದ್ದಾರೆ.

29 ವರ್ಷದ ಡಿಎಸ್‌ಪಿ ಶಿಲ್ಪಾ ಸಾಹು ಅವರು ಐದು ತಿಂಗಳ ಗರ್ಭಿಣಿ. ಹೀಗಾಗಿ ಕೆಲವು ದಿನಗಳಿಂದ ಅವರು ಕ್ಷೇತ್ರ ಕಾರ್ಯದಿಂದ ದೂರವಿದ್ದರು. ಆದರೆ ರಾಜ್ಯದಲ್ಲಿ ಈಗ ಕೊರೊನಾ ಪ್ರಕರಣಗಳು ಏರಿಕೆಯಾಗಿರುವುದರಿಂದ ಲಾಕ್‌ಡೌನ್ ಹೇರಲಾಗಿದ್ದು, ಪರಿಸ್ಥಿತಿ ನಿರ್ವಹಣೆಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

“ದೇಶದಲ್ಲಿ ಅತಿ ವೇಗವಾಗಿ ಕೊರೊನಾ ಸೋಂಕು ಹರಡುತ್ತಿದೆ. ಈ ಹರಡುವಿಕೆಯನ್ನು ತಡೆಯಲು ದಂತೇವಾಡದಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಈ ಸಮಯದಲ್ಲಿ ಜನರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕಾಗಿದೆ. ಇದರ ಮೇಲೆ ನಿಗಾ ಇಡುವುದು ಈಗ ಅವಶ್ಯಕವಾಗಿದೆ” ಎಂದು ಹೇಳುತ್ತಾ, “ಯಾರೂ ಮನೆಯಿಂದ ಹೊರಗೆ ಬರಬೇಡಿ, ನಿಮ್ಮನ್ನು ನೀವು ವೈರಸ್‌ನಿಂದ ರಕ್ಷಿಸಿಕೊಳ್ಳಿ” ಎಂದು ಜನರಿಗೆ ಮನವಿ ಮಾಡಿದ್ದಾರೆ.

“ಜನರ ರಕ್ಷಣೆ ನಮಗೆ ಮುಖ್ಯ. ಹೀಗಾಗಿ ನಾವು ಹೊರಗೆ ಇದ್ದೇವೆ. ನಮಗಾಗಿ ನೀವು ಕೂಡ ಮನೆಯಲ್ಲಿಯೇ ಉಳಿಯಿರಿ” ಎಂದು ತಿಳಿಸಿದ್ದಾರೆ. ಗರ್ಭಿಣಿಯಾದ ನಾನು ಕೊರೊನಾ ಜಾಗೃತಿ ಕುರಿತು ರಸ್ತೆಗೆ ಇಳಿದರೆ ಜನರಿಗೆ ಇದರಿಂದ ಸಂದೇಶವೂ ತಲುಪುತ್ತದೆ ಎಂದಿದ್ದಾರೆ.

ಛತ್ತೀಸ್‌ಗಡ ಸಿಎಂ ಭೂಪೇಶ್ ಬಗೇಲ್ ಶಿಲ್ಪಾ ಸಾಹು ಅವರ ಕಾರ್ಯವನ್ನು ಮೆಚ್ಚಿ ಟ್ವೀಟ್ ಮಾಡಿದ್ದು, “ಸಮಾಜಕ್ಕೆ ಶಿಲ್ಪಾ ಅವರ ಕಾರ್ಯ ಒಳ್ಳೆ ಉದಾಹರಣೆಯಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಶಿಲ್ಪಾ ಅವರ ಕಾರ್ಯಾಚರಣೆ ಹಲವರಿಗೆ ಸ್ಫೂರ್ತಿ. ಗರ್ಭಿಣಿಯಾಗಿದ್ದರೂ ಅವರು ರಸ್ತೆಗೆ ಕಾರ್ಯಾಚರಣೆಗೆ ಇಳಿದಿದ್ದಾರೆ” ಎಂದಿದ್ದಾರೆ.

ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಲವು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಡಿಎಸ್‌ಪಿ ಗರ್ಭಿಣಿಯಾಗಿರುವುದರಿಂದ, ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಅಧಿಕಾರಿಗಳು ಅವರನ್ನು ರಸ್ತೆಗಿಳಿಸಬಾರದು ಎಂದು ಕೇಳಿಕೊಂಡಿದ್ದಾರೆ.

ಛತ್ತೀಸ್‌ಗಡದಲ್ಲಿ ಮಂಗಳವಾರ 13,834 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಸದ್ಯಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,29,000 ಇದೆ. ಏಪ್ರಿಲ್ 18ರಿಂದ ದಂತೇವಾಡದಲ್ಲಿ ಲಾಕ್‌ಡೌನ್ ಹೇರಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img