Tuesday, April 13, 2021
Home ಕೋವಿಡ್-19 ಚಾಮರಾಜನಗರ: ಕೃಷಿ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಸೋಂಕು

ಇದೀಗ ಬಂದ ಸುದ್ದಿ

ಚಾಮರಾಜನಗರ: ಕೃಷಿ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಸೋಂಕು

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 64 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 186ಕ್ಕೆ ಏರಿದೆ.

ತಾಲ್ಲೂಕಿನ ಹರದನಹಳ್ಳಿ ಬಳಿಯ ಕೃಷಿ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಈ ಪೈಕಿ 11 ವಿದ್ಯಾರ್ಥಿನಿಯರು ಹಾಗೂ ನಾಲ್ವರು ವಿದ್ಯಾರ್ಥಿಗಳು. ಒಬ್ಬರು ಸಿಬ್ಬಂದಿಗೂ ಸೋಂಕು ದೃಢಪಟ್ಟಿದೆ.

‘ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅವರನ್ನು ವಾಪಸ್‌ ಹಾಸ್ಟೆಲ್‌ಗೆ ಕಳುಹಿಸಲಾಗಿದೆ. ಎಲ್ಲರೂ ಆರೋಗ್ಯದಿಂದ ಇದ್ದಾರೆ’ ಎಂದು ಕಾಲೇಜಿನ ವಿಶೇಷ ಅಧಿಕಾರಿ ಡಾ.ಎಂ.ಪಿ.ರಾಜಣ್ಣ ಅವರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಲೇಜಿನಲ್ಲಿ 90 ವಿದ್ಯಾರ್ಥಿಗಳಿದ್ದಾರೆ. ಎಲ್ಲರ ಆರೋಗ್ಯದ ಮೇಲೆ ಕಾಳಜಿ ವಹಿಸಲಾಗಿದೆ. ಬೇಕಾದ ಔಷಧಿಗಳನ್ನು ಖರೀದಿಸಿ ನೀಡಲಾಗಿದೆ. ಉತ್ತಮ ಆಹಾರವನ್ನೂ ಪೂರೈಸಲಾಗುತ್ತಿದೆ. ಸೋಂಕಿತ ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ನೀಡಲಾಗಿದೆ. ಮಕ್ಕಳೊಂದಿಗೆ ಅವರು ಮಾತನಾಡಿದ್ದಾರೆ. ಯಾರಿಗೂ ತೀವ್ರತರವಾದ ರೋಗ ಲಕ್ಷಣ ಇಲ್ಲ’ ಎಂದು ಅವರು ಮಾಹಿತಿ ನೀಡಿದರು.

‘ಎರಡು ದಿನಗಳ ಕಾಲ ಕಾಲೇಜಿಗೆ ರಜೆ ನೀಡಲಾಗಿದೆ. ಸ್ಯಾನಿಟೈಸ್‌ ಮಾಡಲಾಗಿದೆ. ನಾನು ಸೇರಿದಂತೆ ಎಲ್ಲ ಸಿಬ್ಬಂದಿ ಕ್ವಾರಂಟೈನ್‌ ಆಗಿದ್ದೇವೆ. ಇದುವರೆಗೆ ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ’ ಎಂದು ಅವರು ಹೇಳಿದರು.

ರಂಗನಾಥ ದೇವಾಲಯ ಬಂದ್‌: ಪ್ರಧಾನ ಅರ್ಚಕ ಹಾಗೂ ಇತರರಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯವನ್ನು ಬಂದ್‌ ಮಾಡಲಾಗಿದ್ದು, ಗುರುವಾರ ರಂಗನಾಥಸ್ವಾಮಿಗೆ ಪೂಜೆಯಾಗಿಲ್ಲ. ದಿನ ನಿತ್ಯದ ಪೂಜೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಉಪವಿಭಾಗಾಧಿಕಾರಿ ಅವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದಾರೆ. ಗುರುವಾರ ಸಂಜೆಯವರೆಗೂ ಪರ್ಯಾಯ ಅರ್ಚಕರ ವ್ಯವಸ್ಥೆ ಆಗಿಲ್ಲ.

ಅರ್ಚಕರು ಹಾಗೂ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಬಾಗಿಲು ಹಾಕಲಾಗಿದೆ. ತೀರ್ಥ ಪ್ರಸಾದ ವಿತರಣೆ, ದಾಸೋಹವನ್ನೂ ಸ್ಥಗಿತಗೊಳಿಸಲಾಗಿದೆ. ಬಂದ ಪ್ರವಾಸಿಗರನ್ನು ವಾಪಸ್‌ ಕಳುಹಿಸಲಾಗುತ್ತಿದೆ.

ಶರವೇಗದಲ್ಲಿ ಹೆಚ್ಚುತ್ತಿದೆ ಪ್ರಕರಣ

ಈ ಮಧ್ಯೆ, ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಗುರುವಾರ 1248 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,193 ಮಂದಿಯ ವರದಿ ನೆಗೆಟಿವ್‌ ಬಂದಿದೆ. 55 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಮೈಸೂರಿನಲ್ಲಿ ಏಳು, ಬೆಂಗಳೂರು ಮತ್ತು ರಾಮನಗರದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

ಗುರುವಾರ 20 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 186 ಮಂದಿ ಸೋಂಕಿತರಿದ್ದಾರೆ. ಆರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 102 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಗುರುವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 7,258ಕ್ಕೆ ಏರಿದೆ. 6,940 ಮಂದಿ ಗುಣಮುಖರಾಗಿದ್ದಾರೆ. 112 ಮಂದಿ ಕೋವಿಡ್‌ನಿಂದ ಹಾಗೂ 20 ಮಂದಿ ಇತರ ಕಾರಣಗಳಿಂದ ಕೊನೆಯುಸಿರೆಳಿದ್ದಾರೆ.

ಗುರುವಾರ ದೃಢಪಟ್ಟ 64 ಪ್ರಕರಣಗಳ ಪೈಕಿ ಚಾಮರಾಜನಗರ ತಾಲ್ಲೂಕು ಒಂದರಲ್ಲಿಯೇ 28 ಪ್ರಕರಣಗಳು ವರದಿಯಾಗಿವೆ. ಯಳಂದೂರು ತಾಲ್ಲೂಕಿನಲ್ಲಿ 19, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ತಲಾ ಏಳು ಮತ್ತು ಹನೂರು ತಾಲ್ಲೂಕಿನಲ್ಲಿ ಮೂರು ಪ್ರಕರಣಗಳು ದೃಢಪಟ್ಟಿವೆ.

TRENDING