ಪಾಲಕ್ಕಾಡ್, ಏ. 8: ಕೇರಳದ ವಿಧಾನ ಸಭೆ ಚುನಾವಣೆ ಏಪ್ರಿಲ್ 6ರಂದು ಪೂರ್ಣಗೊಂಡಿದ್ದು, ಈಗ ರಾಜ್ಯದಲ್ಲಿ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.
ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೆಟ್ರೋ ಮ್ಯಾನ್ ಇ ಶ್ರೀಧರನ್ ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಪಿಣರಾಯಿ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು. ತಮ್ಮನ್ನು ಮುಖ್ಯಮಂತ್ರಿಯಾಗುವಂತೆ ಬಿಜೆಪಿ ಕೇಳಿದರೆ ತಾವು ನಿರಾಕರಿಸುವುದಿಲ್ಲ ಎಂದೂ ಹೇಳಿದ್ದಾರೆ.
“ನಾನು ಪಿಣರಾಯಿ ವಿಜಯನ್ಗಿಂತ ಉತ್ತಮ ಸಿಎಂ ಆಗಬಲ್ಲೆ. ಇನ್ನಾವುದೇ ರಾಜ್ಯದ ಮುಖ್ಯಮಂತ್ರಿಗಳಿಗಿಂತಲೂ ಚೆನ್ನಾಗಿ ಕಾರ್ಯನಿರ್ವಹಿಸಬಲ್ಲೆ. ಇಡೀ ದೇಶದಲ್ಲೇ ಉತ್ತಮ ಸಿಎಂ ಎನಿಸಿಕೊಳ್ಳುತ್ತೇನೆ” ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವಿಜಯಾನಂತರದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪಾಲಕ್ಕಾಡ್ನಲ್ಲಿ ಹೆಚ್ಚು ಕಾಲ ನಾನು ಇರಲಿಲ್ಲ. ಆದರೆ ಎಲ್ಲರಿಗೂ ನನ್ನ ಬಗ್ಗೆ ಎಲ್ಲವೂ ತಿಳಿದಿದೆ. ನನ್ನ ಬಗ್ಗೆ ಆರು ಪುಸ್ತಕಗಳಿವೆ. ಹಲವರು ಆ ಪುಸ್ತಕ ಓದಿದ್ದಾರೆ. ನನ್ನ ಬಗ್ಗೆ ಪುಟ್ಟ ಮಕ್ಕಳಿಗೂ ತಿಳಿದಿದೆ. ನನ್ನ ಬಗ್ಗೆ ಅವರಿಗೆಲ್ಲಾ ತುಂಬು ಉತ್ಸಾಹ ಹಾಗೂ ಅಪಾರ ಗೌರವವಿದೆ ಎಂದು ಹೇಳಿದ್ದಾರೆ. ತಮ್ಮ ಚರಿಷ್ಮಾದಿಂದಲಾಲೇ ಸಾಕಷ್ಟು ಮತ ಗಳಿಸಿರುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣಾಪೂರ್ವ ಸಮೀಕ್ಷೆಗಳು, ಬಿಜೆಪಿ ಕೇರಳದಲ್ಲಿ 35 ಕ್ಷೇತ್ರಗಳನ್ನು ಗೆಲ್ಲುವುದಾಗಿ ತಿಳಿಸಿವೆ. 35 ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ ಕಿಂಗ್ ಮೇಕರ್ ಆಗಲಿದೆ. ಆಗ ಯಾರು ಹೇಗೆ ಆಡಳಿತ ನಡೆಸಬಹುದು ಎಂಬುದರ ಕುರಿತು ಆಲೋಚನೆ ಮಾಡಬಹುದು ಎಂದಿದ್ದಾರೆ.