Saturday, April 17, 2021
Home ಸುದ್ದಿ ಜಾಲ ಪ್ರಸಿದ್ಧ ಶಿಕ್ಷಣ ತಜ್ಞೆ ‘ಫಾತಿಮಾ ಝಕಾರಿಯಾ’ ನಿಧನ

ಇದೀಗ ಬಂದ ಸುದ್ದಿ

ಪ್ರಸಿದ್ಧ ಶಿಕ್ಷಣ ತಜ್ಞೆ ‘ಫಾತಿಮಾ ಝಕಾರಿಯಾ’ ನಿಧನ

 ಮುಂಬೈ, ಏ. 7: ಪ್ರಸಿದ್ಧ ಶಿಕ್ಷಣ ತಜ್ಞೆ, ಪತ್ರಕರ್ತೆ ಹಾಗೂ ಪದ್ಮಶ್ರೀ ಪುರಸ್ಕೃತೆ ಫಾತಿಮಾ ಝಕಾರಿಯಾ ಅವರು ಮಂಗಳವಾರ ಮಹಾರಾಷ್ಟ್ರದಲ್ಲಿ ನಿಧನರಾಗಿದ್ದಾರೆ.

85 ವರ್ಷದ ಝಕಾರಿಯಾ ಅವರು ಮಾಜಿ ಸಚಿವ, ಸಂಸದ, ಬರಹಗಾರ ರಫೀಕ್ ಝಕಾರಿಯಾ ಅವರ ಪತ್ನಿ ಹಾಗೂ ಪತ್ರಕರ್ತ ಫರೀದ್ ಝಕಾರಿಯಾ ಅವರ ತಾಯಿ.

ಮೌಲಾನಾ ಆಜಾದ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆಯೂ ಆಗಿದ್ದ ಇವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ಮಂಗಳವಾರ ಸಂಜೆ ಮೃತಪಟ್ಟಿರುವುದಾಗಿ ಮೌಲಾನಾ ಆಜಾದ್ ಕಾಲೇಜಿನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫಾತಿಮಾ ಝಕಾರಿಯಾ ಅವರು ಹಲವು ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಿದ್ದಾರೆ. ಪತ್ರಿಕೋದ್ಯಮ, ಸಾಮಾಜಿಕ ಕಾರ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸುಮಾರು 50 ವರ್ಷಗಳ ಅನುಭವ ಅವರದ್ದು. ಲಖ್ನೊ ಹಾಗೂ ಮುಂಬೈನಲ್ಲಿ ಶಿಕ್ಷಣ ಪೂರೈಸಿದ ಅವರು, ಮುಂಬೈನಲ್ಲಿ ಮಕ್ಕಳ ಹಾಗೂ ಮಹಿಳೆಯರ ನಿವಾಸ ಸ್ಥಾಪಿಸಿ ಸುಮಾರು 500 ದೀನದಲಿತ ಮಕ್ಕಳಿಗೆ ನೆರವಾಗಿದ್ದರು.

1963ರಲ್ಲಿ ಝಕಾರಿಯಾ ಅವರು ಮಕ್ಕಳಿಗಾಗಿ ಬರೆಯಲು ಆರಂಭಿಸಿದರು. 1970ರಿಂದ 1980ರವರೆಗೂ ಇಂಗ್ಲಿಷ್ ನಿಯತಕಾಲಿಕೆಯಲ್ಲಿ ಕೆಲಸ ಮಾಡಿದರು. ಟೈಮ್ಸ್ ಆಫ್ ಇಂಡಿಯಾದ ಸಹಾಯಕ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.

ಅವರಿಗೆ 1983ರಲ್ಲಿ ಪತ್ರಿಕೋದ್ಯಮದಲ್ಲಿನ ಸೇವೆಗಾಗಿ ಸರೋಜಿನಿ ನಾಯ್ದು ಪ್ರಶಸ್ತಿ ಲಭಿಸಿತ್ತು.

TRENDING