ಬೆಂಗಳೂರು: ಅಧಿಕಾರ ದುರುಪಯೋಗಪಡಿಸಿಕೊಂಡು ಕರ್ತವ್ಯಕ್ಕೆ ಲೋಪ ಎಸಗಿದ ಆರೋಪದಡಿ ಹಲಸೂರು ಗೇಟ್ ಪೊಲೀಸ್ ಠಾಣೆಯ ಪಿಎಸ್ಐ ಪಿ.ಜಿ. ಸಂತೋಷ ಮತ್ತು ಹೆಡ್ ಕಾನ್ಸ್ಟೇಬಲ್ ವೆಂಕಪ್ಪ ಹೂಗಾರ್ ಅವರನ್ನು ಡಿಸಿಪಿ ಎ.ಎನ್. ಅನುಚೇತ್ ಅವರು ಅಮಾನತು ಮಾಡಿದ್ದಾರೆ.
ಸಿದ್ದೇಶ್ವರ್ ಹರಿಬಾ ಶೆಂಧೆ ಅವರಿಗೆ ಸೇರಿದ ಡಿ.ಕೆ. ಮಾರುಕಟ್ಟೆಯಲ್ಲಿನ ಸಂಸ್ಕಾರ್ ಎಂಟರ್ ಪ್ರೈಸಸ್ ಅಂಗಡಿ ಹಾಗೂ ಗೋಲ್ಡ್ ರಿಫೈನರಿ ವಾಣಿಜ್ಯ ಮಳಿಗೆ ಮೇಲೆ ಮಾ.12 ರಂದು ಪ್ರಭಾರ ಇನ್ಸ್ಪೆಕ್ಟರ್ ಶಿವಕುಮಾರ್, ಪಿಎಸ್ಐ ಸಂತೋಷ, ವೆಂಕಪ್ಪ ಹೂಗಾರ್ ಹಾಗೂ ಇನ್ನಿತರ ಸಿಬ್ಬಂದಿ ದಾಳಿ ನಡೆಸಿದ್ದರು.
ದಾಳಿ ವೇಳೆ ವಶಕ್ಕೆ ಪಡೆಯಲಾದ ಶೇ. 88.35ರಷ್ಟು ಪ್ಯೂರಿಟಿಯ 266.74 ಗ್ರಾಂ ಚಿನ್ನದ ಗಟ್ಟಿ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಿ ಪಿಎಸ್ಐ ಸಂತೋಷ್ ಮತ್ತು ಹೆಡ್ಕಾನ್ಸ್ಟೇಬಲ್ ವೆಂಕಪ್ಪ ಹೂಗಾರ್ ವಿರುದ್ಧ ಮಳಿಗೆ ಮಾಲೀಕ ಸಿದ್ದೇಶ್ವರ್ ಹರಿಬಾ ಶಿಂಧೆ ಅವರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಹಿರಿಯ ಅಧಿಕಾರಿಗಳು ಪಿಎಸ್ಐ ಮತ್ತು ಹೆಡ್ ಕಾನ್ಸ್ಟೇಬಲ್ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.