Saturday, April 17, 2021
Home ಸುದ್ದಿ ಜಾಲ 3ನೇ ಹಂತದ ಕೊರೊನಾ ಲಸಿಕೆಗೆ ಶಿರಸಿಯಲ್ಲಿ ಸಚಿವ ಸುಧಾಕರ್ ಚಾಲನೆ

ಇದೀಗ ಬಂದ ಸುದ್ದಿ

3ನೇ ಹಂತದ ಕೊರೊನಾ ಲಸಿಕೆಗೆ ಶಿರಸಿಯಲ್ಲಿ ಸಚಿವ ಸುಧಾಕರ್ ಚಾಲನೆ

ಕಾರವಾರ, ಫೆ. 28: ದೇಶದಾದ್ಯಂತ ಮಾರ್ಚ್ 1ರಂದು ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲಿದೆ. ಕರ್ನಾಟಕದ ಆರೋಗ್ಯ ಸಚಿವ ಡಾ. ಸುಧಾಕರ್ ಶಿರಸಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಭಾನುವಾರ ಸಂಜೆ ಕಾರವಾರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿರುವ ಸಚಿವರು, ಸೋಮವಾರ ಬೆಳಗ್ಗೆ ಗೋಕರ್ಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ಶಿರಸಿಗೆ ತೆರಳಲಿರುವ ಅವರು, ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

65 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆ (ಕೋ ಮಾರ್ಬಿಡಿಟಿ) ಉಳ್ಳ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ದೇಶಾದ್ಯಂತ ಮಾರ್ಚ್ 1ರಂದು ಚಾಲನೆ ಸಿಗಲಿದೆ.

ಡಾ. ಸುಧಾಕರ್ ಬಳಿಕ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬಹುಪಯೋಗಿ ವಿದ್ಯಾಭವನದ ಉದ್ಘಾಟನಾ ಸಮಾರಂಭ ಹಾಗೂ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ತ್ರಿದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

15 ಆಸ್ಪತ್ರೆ ಗುರುತು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಖಾಸಗಿ ಹಾಗೂ 13 ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಂಪೂರ್ಣ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ರೂ.250 ಪಾವತಿಸಬೇಕೆಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ.

ಜಿಲ್ಲೆಯಲ್ಲಿ ಭಟ್ಕಳ, ಕುಮಟಾ, ಹೊನ್ನಾವರ, ಅಂಕೋಲಾ, ಸಿದ್ದಾಪುರ, ಶಿರಸಿ, ಮುಂಡಗೋಡ, ಯಲ್ಲಾಪುರ, ಜೊಯಿಡಾ, ಹಳಿಯಾಳ ತಾಲೂಕು ಆಸ್ಪತ್ರೆಗಳಲ್ಲಿ. ಕಾರವಾರದ‌ ಜಿಲ್ಲಾ ಆಸ್ಪತ್ರೆ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಮತ್ತು ಖಾಸಗಿ ಆಸ್ಪತ್ರೆಗಳಾದ ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಹಾಗೂ ಶಿರಸಿಯ ಟಿಎಸ್‌ಎಸ್ ಶ್ರೀಪಾದ್ ಹೆಗಡೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಲಸಿಕೆ ಪಡೆಯಬಹುದು.

ವಾರದಲ್ಲಿ ನಾಲ್ಕು ದಿನ ಮಾತ್ರ; ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ವಾರದಲ್ಲಿ ನಾಲ್ಕು ದಿನ ಮಧ್ಯಾಹ್ನ 12 ರಿಂದ ಸಂಜೆ 5ರವರೆಗೆ ಪಡೆಯಬಹುದು. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಮಾತ್ರ ಲಸಿಕೆ ಪಡೆಯಬಹುದು.

ಖಾಸಗಿ ಆಸ್ಪತ್ರೆಗಳಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಎಲ್ಲಾ ಕರ್ತವ್ಯದ ದಿನಗಳಲ್ಲೂ ಲಸಿಕೆ ನೀಡಲಾಗುತ್ತದೆ. ಮೊದಲು ಬಂದವರಿಗೆ ಪ್ರಥಮ ಆದ್ಯತೆಯ‌ ಮೇರೆಗೆ ಒಂದು ಕೇಂದ್ರದಲ್ಲಿ ದಿನಕ್ಕೆ ಒಟ್ಟು 200 ಫಲಾನುಭವಿಗಳಿಗೆ ಮಾತ್ರ ದಿನಕ್ಕೆ ಲಸಿಕೆ ನೀಡಲಾಗುತ್ತದೆ.

ಅಪಾಯಿಂಟ್ಮೆಂಟ್ ಪಡೆಯಿರಿ ಮುಂಚಿತವಾಗಿ ಕೋವಿನ್ ಆಯಪ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಅಪಾಯಿಂಟ್ಮೆಂಟ್ ಪಡೆದು ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದು. ಕೋವಿನ್ ಆಯಪ್ ಇಲ್ಲದಿದ್ದರೆ ಆರೋಗ್ಯ ಸೇತು ಆಪ್ cowin.gov.in ವೆಬ್ ಪೋರ್ಟಲ್ ಮೂಲಕವೂ ನೋಂದಾಯಿಸಿಕೊಳ್ಳಬಹುದು.

ಕಂಪ್ಯೂಟರ್, ಸ್ಮಾರ್ಟ್ ಫೋನ್ ಇಲ್ಲದವರು ಸಾಮಾನ್ಯ ಸೇವಾ ಕೇಂದ್ರ (ಸಿಎಸ್ ಸಿ) ಮೂಲಕವೂ ನೋಂದಣಿ ಮಾಡಿಸಿಕೊಳ್ಳಬಹುದು. ಆದರೆ, ಲಸಿಕೆಗೆ ಮೊದಲೇ ಹೆಸರು ನೊಂದಾಯಿಸಿಕೊಳ್ಳುವುದು ಕಡ್ಡಾಯವಲ್ಲ. ವ್ಯಾಕ್ಸಿನ್ ಸೆಂಟರ್ ಗೆ ಹಾಗೇ ಹೋಗಿ ಲಸಿಕೆ ಹಾಕಿಸಿಕೊಂಡು ಬರಬಹುದು.

TRENDING