Saturday, April 17, 2021
Home ಅಂತರ್ ರಾಜ್ಯ ಮೇಕೆ ತಲೆ ಕತ್ತರಿಸಿ ಕೆಲಸ ಕಳೆದುಕೊಂಡ ಪೊಲೀಸ್​ ಅಧಿಕಾರಿ!

ಇದೀಗ ಬಂದ ಸುದ್ದಿ

ಮೇಕೆ ತಲೆ ಕತ್ತರಿಸಿ ಕೆಲಸ ಕಳೆದುಕೊಂಡ ಪೊಲೀಸ್​ ಅಧಿಕಾರಿ!

ಜೈಪುರ: ಪ್ರಾಣಿ ಹಿಂಸೆ ಮಹಾಪಾಪ ಎನ್ನುವ ಯುಗದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಮೇಕೆಯ ತಲೆ ಕತ್ತರಿಸುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಇದೀಗ ಕೆಲಸವನ್ನೇ ಕಳೆದುಕೊಳ್ಳುವಂತಾಗಿದೆ. ಮೇಕೆಯನ್ನು ಬಲಿ ಕೊಡುವ ವಿಡಿಯೋ ವೈರಲ್​ ಆಗಿದ್ದರಿಂದಲೇ ಈ ಸಮಸ್ಯೆಯಾಗಿದ್ದಾಗಿ ಹೇಳಲಾಗಿದೆ.

ರಾಜಸ್ಥಾನದ ಕೋಟಾ ಜಿಲ್ಲೆಯ ಎಸ್‌ಎಚ್‌ಒ ಭನ್ವರ್ ಸಿಂಗ್ ಅಮಾನತಾದ ಅಧಿಕಾರಿ. ಅವರು ಕೆಲ ದಿನಗಳ ಹಿಂದೆ ಬರಾನ್ ಜಿಲ್ಲೆಯ ಕಾಸ್ಬಥಾನಾ ಪ್ರದೇಶದ ಪರಡ್ವ ಗ್ರಾಮದ ದೇವಸ್ಥಾನವೊಂದರಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮೊಮ್ಮಗನ ಕೂದಲು ಕೊಡುವ ಆ ಶುಭ ಸಂದರ್ಭದಲ್ಲಿ ಮೇಕೆಯನ್ನು ಬಲಿ ಕೊಡಲಾಗಿದೆ. ಭನ್ವರ್​ ಸಿಂಗ್​ ಅವರೇ ಮೇಕೆಯ ತಲೆ ಕತ್ತರಿಸಿದ್ದಾರೆ. ಈ ವಿಡಿಯೋವನ್ನು ಅಲ್ಲಿದ್ದವರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿರುವುದು ಭನ್ವರ್​ ಸಿಂಗ್​ ಅವರೇ ಎಂದು ಅನೇಕರು ದೂರಿದ ನಂತರ ಈ ಕುರಿತಾಗಿ ಹೆಚ್ಚಿನ ವಿಚಾರಣೆ ನಡೆಸಲು ಗುರುವಾರದಂದು ಕೋಟಾ ಗ್ರಾಮೀಣ ಎಸ್‌ಪಿ ಶರದ್ ಚೌಧರಿ ಆದೇಶ ಹೊರಡಿಸಿದ್ದರು. ಪ್ರಾಥಮಿಕ ವಿಚಾರಣಾ ವರದಿಯ ಆಧಾರದ ಮೇಲೆ, ಎಸ್‌ಎಚ್‌ಒ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಸಂಬಂಧಿತ ವಿಭಾಗಗಳ ಪ್ರಕಾರ ಪ್ರಕರಣದ ನೋಂದಣಿಯನ್ನು ಮಾಡಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.

TRENDING