Saturday, April 17, 2021
Home ಸುದ್ದಿ ಜಾಲ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪ್ರಶಾಂತ್ ಕಿಶೋರ್

ಇದೀಗ ಬಂದ ಸುದ್ದಿ

ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪ್ರಶಾಂತ್ ಕಿಶೋರ್

 ನವದೆಹಲಿ, ಫೆ. 27: ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಸಮರ ಜೋರಾಗುತ್ತಿದೆ. ಇಲ್ಲಿ ಒಂದು ಕಾಲದಲ್ಲಿ ಅಸ್ತಿತ್ವವೇ ಇಲ್ಲದ ಬಿಜೆಪಿ, ಪ್ರಾದೇಶಿಕ ಪಕ್ಷ ಟಿಎಂಸಿ ಜತೆ ನೇರ ಹಣಾಹಣಿ ನಡೆಸುತ್ತಿದೆ. ಹೀಗಾಗಿ ಎಡಪಕ್ಷಗಳು, ಕಾಂಗ್ರೆಸ್ ಸೇರಿದಂತೆ ಯುಪಿಎ ಒಕ್ಕೂಟಕ್ಕಿಂತಲೂ ಆಡಳಿತಾರೂಢ ಟಿಎಂಸಿಗೆ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳೇ ದೊಡ್ಡ ಸವಾಲಾಗಿವೆ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಚಾರ ತಂತ್ರ ಹೆಣೆಯುತ್ತಿರುವ ಚುನಾವಣಾ ಪ್ರಚಾರ ಚಾಣಾಕ್ಷ ಪ್ರಶಾಂತ್ ಕಿಶೋರ್, ಬಂಗಾಳದ ಜನರು ಸಂದೇಶದೊಂದಿಗೆ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಮಾರ್ಚ್ 27ರಂದು ಆರಂಭವಾಗಲಿರುವ ವಿಧಾನಸಭೆ ಚುನಾವಣೆಯನ್ನು ಉಲ್ಲೇಖಿಸಿರುವ ಅವರು, ದೇಶದಲ್ಲಿನ ಅತ್ಯಂತ ಪ್ರಮುಖ ಪ್ರಜಾಪ್ರಭುತ್ವದ ಯುದ್ಧಗಳಲ್ಲಿ ಒಂದರ ಹೋರಾಟ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ ಎಂದಿದ್ದಾರೆ.

ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ಕಂಪೆನಿಯು ಬಿಜೆಪಿಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರುವ ಟಿಎಂಸಿಯ ಉದ್ದೇಶಕ್ಕೆ ಸಹಾಯ ಮಾಡುತ್ತಿದೆ. ವಿವಿಧ ಹಂತಗಳಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಟಿಎಂಸಿಗಾಗಿ ವಿಭಿನ್ನ ತಂತ್ರಗಳನ್ನು ಹೆಣೆದಿದೆ. ‘ಬಂಗಾಳವು ತನ್ನ ಸ್ವಂತ ಮಗಳನ್ನು ಮಾತ್ರವೇ ಬಯಸುತ್ತದೆ’ ಎಂದು ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಪ್ರಶಾಂತ್ ಕಿಶೋರ್ ಪುನರುಚ್ಚರಿಸಿದ್ದಾರೆ. ಈ ಮೂಲಕ ಬಂಗಾಳದ ಹೊರಗಿನ ಬಿಜೆಪಿಯನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

‘ಭಾರತದ ಪ್ರಜಾಪ್ರಭುತ್ವದ ಪ್ರಮುಖ ಸಮರಗಳಲ್ಲಿ ಒಂದರ ಹೋರಾಟ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಹಾಗೆಯೇ ಬಂಗಾಳದ ಜನತೆ ತಮ್ಮ ಸಂದೇಶಗಳೊಂದಿಗೆ ಸಿದ್ಧರಿದ್ದು, ಸೂಕ್ತ ಉತ್ತರ ನೀಡಲು ದೃಢನಿರ್ಧಾರ ಮಾಡಿಕೊಂಡಿದ್ದಾರೆ. ಬಂಗಾಳವು ತನ್ನ ಸ್ವಂತ ಮಗಳನ್ನು ಮಾತ್ರ ಬಯಸಿದೆ. ಮೇ 2ರಂದು ನನ್ನ ಕೊನೆಯ ಟ್ವೀಟ್‌ಅನ್ನು ತೋರಿಸಿ’ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 29ರವರೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

TRENDING