Saturday, April 17, 2021
Home ಸುದ್ದಿ ಜಾಲ ಶಾಲೆಯಿಂದ 317 ಬಾಲಕಿಯರ ಸಾಮೂಹಿಕ ಅಪಹರಣ..!

ಇದೀಗ ಬಂದ ಸುದ್ದಿ

ಶಾಲೆಯಿಂದ 317 ಬಾಲಕಿಯರ ಸಾಮೂಹಿಕ ಅಪಹರಣ..!

ಲಾಗೋಸ್, ಫೆ.27 : ಉತ್ತರ ನೈಜೀರಿಯಾದ ಬೋರ್ಡಿಂಗ್ ಶಾಲೆಯಿಂದ ಬಂದೂಕುಧಾರಿಗಳು 317 ಬಾಲಕಿಯರ ಸಾಮೂಹಿಕ ಅಪಹರಣ ನಡೆಸಿದ್ದಾರೆ. ಪಶ್ಚಿಮ ಆಫ್ರಿಕಾ ರಾಷ್ಟ್ರದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಅಪಹರಣದ ಸರಣಿಯಲ್ಲಿ ಇದು ಇತ್ತೀಚೆಗೆ ನಡೆದ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಜಂಗೆಬೆ ಟೌನ್‍ನ ಸರ್ಕಾರಿ ಬಾಲಕಿಯ ಕಿರಿಯ ಮಾಧ್ಯಮಿಕ ಶಾಲೆಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ ಎಲ್ಲ 317 ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಮಿಲಿಟರಿ ಜಂಟಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯರನ್ನು ರಕ್ಷಿಸಲು ಯತ್ನಿಸಿದ್ದಾರೆ ಎಂದು ಜಾಮ್‍ಪಾರ ರಾಜ್ಯದ ಪೊಲೀಸ್ ವಕ್ತಾರ ಮೊಹಮ್ಮದ್ ಶೆಹು ಹೇಳಿದ್ದಾರೆ.

ವಿದ್ಯಾರ್ಥಿನಿಯೊಬ್ಬಳ ಪೋಷಕರಾದ ನಸೀರು ಅಬ್ದುಲ್ಲಾಹಿ ಮಾತನಾಡಿ, ತಮ್ಮ ಮಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಈ ಶಾಲೆಯಲ್ಲಿ 10 ರಿಂದ 13 ವರ್ಷದ ಮಕ್ಕಳು ಓದುತ್ತಿದ್ದರು ಎಂದು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

ಈ ಶಾಲೆಯ ಬಳಿ ಸೈನಿಕರ ಉಪಸ್ಥಿತಿ ಬಲವಾಗಿದ್ದರೂ ಸಹ ಮಕ್ಕಳನ್ನು ರಕ್ಷಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂಬುದು ನಿರಾಶಾದಾಯಕವಾಗಿದೆ. ಈ ಹಂತದಲ್ಲಿ ನಾವು ದೇವರನ್ನು ಮಾತ್ರ ಮೊರೆ ಹೋಗಿದ್ದೇವೆ. ಬಂದೂಕುಧಾರಿಗಳು ಸಮೀಪದ ಮಿಲಿಟರಿ ಕ್ಯಾಂಪ್ ಮತ್ತು ಚೆಕ್ ಪಾಯಿಂಟ್ ಮೇಲೆ ದಾಳಿ ನಡೆಸಿದ್ದರಿಂದ ಸೈನಿಕರ ಮಧ್ಯ ಪ್ರವೇಶಿಸುವಲ್ಲಿ ತಡವಾಗಿದೆ.

ಆದರೆ, ಬಂದೂಕುಧಾರಿ ಉಗ್ರರು ಶಾಲೆಯಲ್ಲಿ ಹಲವಾರು ಗಂಟೆಗಳ ಕಾಲ ಕಳೆದರು ಎಂದು ಇಲ್ಲಿನ ನಿವಾಸಿ ಮೂಸಾ ಮುಸ್ತಾಫಾ ಹೇಳಿದ್ದಾರೆ. ಆದರೆ, ಘಟನೆಯಲ್ಲಿ ಯಾವುದೇ ಅಪಘಾತಗಳು ಸದ್ಯದಲ್ಲಿ ತಿಳಿದುಬಂದಿಲ್ಲ.
ಹಲವು ದೊಡ್ಡ ಶಸ್ತ್ರಸಜ್ಜಿತ ಗುಂಪುಗಳು ಜಾಮ್‍ಫಾರಾ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಇವರನ್ನು ಸರ್ಕಾರ ಡಕಾಯಿತರು ಎಂದು ಹೇಳುತ್ತದೆ.

ಹಣಕ್ಕಾಗಿ ಇಲ್ಲವೇ ಜೈಲಿನಲ್ಲಿರುವ ತಮ್ಮ ಗುಂಪಿನ ಸದಸ್ಯರನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತದೆ. ನೈಜೀರಿಯ ಅಧ್ಯಕ್ಷ ಮುಹಮ್ಮದು ಬುಹಾರಿ ಮಾತನಾಡಿ, ಸರ್ಕಾರದ ಪ್ರಥಮ ಆಧ್ಯತೆ ಎಲ್ಲ ಶಾಲೆಯ ಒತ್ತೆಯಾಳುಗಳನ್ನು ಸುರಕ್ಷಿತವಾಗಿ, ಜೀವಂತವಾಗಿ, ಯಾವುದೇ ಹಾನಿಗೊಳಗಾಗದ ರೀತಿಯಲ್ಲಿ ಹಿಂದಿರುಗಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.

ವಿಶ್ವಸಂಸ್ಥೆ ಖಂಡನೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಅಪಹರಣಗಳನ್ನು ತೀವ್ರವಾಗಿ ಖಂಡಿಸಿ, ಬಾಲಕಿಯ ತಕ್ಷಣದ ಮತ್ತು ಬೇಷರತ್ತಾದ ಬಿಡುಗಡೆ ಹಾಗೂ ಅವರ ಕುಟುಂಬಗಳಿಗೆ ಸುರಕ್ಷಿತವಾಗಿ ಮರಳಲು ಕರೆ ನೀಡಿದರು. ಶಾಲೆಗಳ ಮೇಲಿನ ದಾಳಿಯು ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಯುಎನ್ ವಕ್ತಾರ ಸ್ಟೀಫನ್ ದುಜಾರ್ರಿಕ್ ಹೇಳಿದ್ದಾರೆ.

ಅಲ್ಲದೆ, ನೈಜೀರಿಯಾದ ಸರ್ಕಾರ ಮತ್ತು ಜನರಿಗೆ ಭಯೋತ್ಪಾದನೆ, ಹಿಂಸಾತ್ಮಕ ಉಗ್ರಗಾಮಿತ್ವ ಮತ್ತು ಸಂಘಟಿತ ಅಪರಾಧದ ವಿರುದ್ಧದ ಹೋರಾಟದಲ್ಲಿ ಯುಎನ್ ಮುಖ್ಯಸ್ಥರು ವಿಶ್ವಸಂಸ್ಥೆ ಬೆಂಬಲವನ್ನು ಪುನರುಚ್ಚರಿಸಿದ್ದಾರೆ ಎಂದು ದುಜಾರ್ರಿಕ್ ತಿಳಿಸಿದ್ದಾರೆ. ಇದೇ ರೀತಿ ಡಿಸೆಂಬರ್ 2020ರಲ್ಲಿ ಕಟ್ಸಿನಾ ರಾಜ್ಯದ ಕಂಕಾರಾದ ಸರ್ಕಾರಿ ವಿಜ್ಞಾನ ಕಿರಿಯ ಮಾಧ್ಯಮಿಕ ಶಾಲೆ 344 ವಿದ್ಯಾರ್ಥಿಗಳನ್ನು ಅಪಹರಿಸಿ, ನಂತರ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

TRENDING