ಬೆಂಗಳೂರು : ಸಾರಿಗೆ ಇಲಾಖೆಯ ಆದಾಯವನ್ನು ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಮ್ಮ ಕಾರ್ಗೋ ಯೋಜನೆಯನ್ನು ಶುಕ್ರವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ ವಿಧಾನಸೌಧದ ಗ್ರಾಂಡ್ ಸ್ಟೈಪ್ಸ್ ಗಳ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ನಿಗಮದ ಯೋಜನೆಗೆ ಹಸಿರು ನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಮೊದಲ ಹಂತದಲ್ಲಿ ರಾಜ್ಯದ 88 ಬಸ್ ನಿಲ್ದಾಣಗಳಲ್ಲಿ ಹಾಗೂ ಅಂತರರಾಜ್ಯದ 21 ನಿಲ್ದಾಣಗಳಲ್ಲಿ ಈ ಕಾರ್ಗೋ ಸೇವೆ ಆರಂಭವಾಗಲಿದ್ದು, ಹಂತ ಹಂತವಾಗಿ ರಾಜ್ಯದ ಎಲ್ಲ ಕಡೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನಿಮಗದ ಬಸ್ ನಿಲ್ದಾಣಗಳಲ್ಲಿ ಪಾರ್ಸೆಲ್ ಕೌಂಟರ್ ಸ್ಥಾಪಿಸಲಾಗುತ್ತಿದ್ದು, ಗ್ರಾಹಕರು ತಮ್ಮ ಪಾರ್ಸಲ್ಗಳನ್ನು ನೋಂದಾಯಿಸಿ ಕಳುಹಿಸಬಹುದು. ಅಲ್ಲದೇ ಗ್ರಾಹಕರು ಪಾರ್ಸೆಲ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕಾಲ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ. ಜತೆಗೆ ಗ್ರಾಹಕರ ವಸ್ತುಗಳಿಗೆ ವಿಮಾ ಸೌಲಭ್ಯ ಅವಕಾಶವೂ ಇರಲಿದೆ ಎಂದು ಮಾಹಿತಿ ನೀಡಿದರು