ಮಂಗಳೂರು: ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪಕ್ಷ ಜೋಕರ್ ಇದ್ದ ಹಾಗೆ. ಯಾರ ಜತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ’ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಲೇವಡಿ ಮಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿಯವರಿಗೆ ರಾಜಕೀಯ ನೈತಿಕತೆ, ಸಿದ್ಧಾಂತ ಏನೂ ಇಲ್ಲ. ಎಲ್ಲಿ ಅವಕಾಶ ಸಿಗುತ್ತದೆ ಅಲ್ಲಿ ಹೋಗುತ್ತಾರೆ. ಅವರದ್ದು ಅವಕಾಶವಾದಿ ರಾಜಕಾರಣ’ ಎಂದರು.
‘ಅವರು ಮುಖ್ಯಮಂತ್ರಿ ಆಗಿದ್ದಾಗ ಉದಾಸೀನದಿಂದ ಕಾಲ ಕಳೆದರು. ಈಗ ಆತಂಕ ಕಾಡುತ್ತಿದೆ. ಅದಕ್ಕಾಗಿ ಕ್ಷೇತ್ರದ ಭೇಟಿ ಮಾಡಿ ಗೋಳಾಡುತ್ತಿದ್ದಾರೆ. ಅಧಿಕಾರ ಇಲ್ಲದಾಗ ಜನರ ಬಳಿಗೆ ಹೋಗುವುದು ಅವರ ಗುಣ’ ಎಂದ ಅವರು, ‘ಮುಂದಿನ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಬಹುಪಾಲು ಶಾಸಕರು ಆಯ್ಕೆಯಾಗಲಿದ್ದಾರೆ. ಜೆಡಿಎಸ್ ನೆಲಕಚ್ಚಲಿದೆ ಎಂಬ ಆತಂಕ ಕುಮಾರಸ್ವಾಮಿ ಅವರಿಗಿದೆ’ ಎಂದು ಹೇಳಿದರು.