Saturday, April 17, 2021
Home ಕ್ರಿಕೆಟ್ 'ದಾವಣಗೆರೆ ಎಕ್ಸ್‌ಪ್ರೆಸ್' ಖ್ಯಾತಿಯ ಆರ್ ವಿನಯ್ ಕುಮಾರ್ ಕ್ರಿಕೆಟ್‌ಗೆ ವಿದಾಯ

ಇದೀಗ ಬಂದ ಸುದ್ದಿ

‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ಆರ್ ವಿನಯ್ ಕುಮಾರ್ ಕ್ರಿಕೆಟ್‌ಗೆ ವಿದಾಯ

ಬೆಂಗಳೂರು: ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಭಾರತದ ಕ್ರಿಕೆಟಿಗ ಹಾಗೂ ಕರ್ನಾಟದ ಮಾಜಿ ಮೆಚ್ಚಿನ ನಾಯಕ ಆರ್. ವಿನಯ್ ಕುಮಾರ್ ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿನಯ್ ಕುಮಾರ್, ಕಳೆದ 25 ವರ್ಷಗಳಲ್ಲಿ ಅನೇಕ ಸ್ಟೇಷನ್‌ಗಳನ್ನು ಹಾದು ಹೋಗಿರುವ ದಾವಣಗೆರೆ ಎಕ್ಸ್‌ಪ್ರೆಸ್, ಕೊನೆಗೂ ನಿವೃತ್ತಿ ಎಂಬ ಸ್ಟೇಷನ್‌ಗೆ ತಲುಪಿದೆ. ಮಿಶ್ರ ಭಾವನೆಗಳೊಂದಿಗೆ ಈ ಮುಖಾಂತರ ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದೊಂದು ಸುಲಭವಾದ ನಿರ್ಧಾರವಾಗಿರಲಿಲ್ಲ. ಆದರೆ ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಂತೆ ನನ್ನ ಜೀವನದಲ್ಲೂ ಆ ದಿನ ಬಂದಿದೆ ಎಂದು ಭಾವುಕ ಸಂದೇಶದಲ್ಲಿ ತಿಳಿಸಿದರು.

ಕ್ರಿಕೆಟ್‌ನ ಗರಿಷ್ಠ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅದೃಷ್ಟ ನನಗೆ ದೊರಕಿದ್ದು, ನನ್ನಿಂದಾಗುವ ಸರ್ವಸ್ವವನ್ನು ನೀಡಿದ್ದೇನೆ. ನನ್ನ ಕ್ರೀಡಾ ಜೀವನ ಜೀವನದುದ್ಧಕ್ಕೂ ನೆನಪಿಸುವ ಅನೇಕ ಘಟನೆಗಳಿಂದ ತುಂಬಿಕೊಂಡಿದೆ. ನನ್ನ ಕನಸು ನನಸಾಗಿಸಲು ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸಿದ್ದೆ. ರಾಜ್ಯ ತಂಡವನ್ನು ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಅಲ್ಲಿಂದ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿ ಎಲ್ಲ ಪ್ರಕಾರದಲ್ಲೂ ದೇಶವನ್ನು ಪ್ರತಿನಿಧಿಸಿದ್ದೇನೆ.

ಈ ಸಂದರ್ಭದಲ್ಲಿ ಬಿಸಿಸಿಐಗೂ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. ದೇಶದ ಪರ ಆಡುವುದು ಪತಿಯೊಬ್ಬ ಕ್ರೀಡಾಪಟುವಿನ ಕಟ್ಟಕಡೆಯ ಕನಸಾಗಿದೆ. ಅದನ್ನು ಸಾಧಿಸಲು ಸಾಧ್ಯವಾಗಿರುವುದು ಸಂತಸ ತಂದಿದೆ. ಭಾರತ ತಂಡದ ನೀಲಿ ಜೆರ್ಸಿ ಧರಿಸಿದ ನೆನಪುಗಳು ಸದಾ ನನ್ನ ಹೃದಯಕ್ಕೆ ಹತ್ತಿರವಾಗಿದೆ.

ಕ್ರಿಕೆಟ್ ಎಂಬುದನ್ನು ನನ್ನ ಪಾಲಿಗೆ ಆಟ ಮಾತ್ರವಾಗಿರಲಿಲ್ಲ. ಅದು ನನ್ನ ಜೀವನ. ಅನೇಕ ಅಂಶಗಳನ್ನು ಕ್ರಿಕೆಟ್ ನನಗೆ ಕಲಿಸಿದೆ. ಏರಿಳಿತಗಳು, ಯಶಸ್ಸು- ವೈಫಲ್ಯ, ಒಳ್ಳೆಯ ದಿನಗಳು, ಕೆಟ್ಟ ದಿನಗಳು. ಇವೆಲ್ಲವೂ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಬರುವಲ್ಲಿ ನೆರವಾಗಿದೆ. ಓರ್ವ ಕ್ರಿಕೆಟಿಗನಾಗಿ ಸಾಧಿಸಿರುವ ಎಲ್ಲ ಅನುಭವಗಳ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.

TRENDING