Saturday, April 17, 2021
Home ಸುದ್ದಿ ಜಾಲ ಯಾವುದೆ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ : ಸಚಿವ ಬೊಮ್ಮಾಯಿ ಸ್ಪಷ್ಟನೆ

ಇದೀಗ ಬಂದ ಸುದ್ದಿ

ಯಾವುದೆ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ : ಸಚಿವ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು,ಫೆ.26- ಯಾವುದೆ ಕಾರಣಕ್ಕೂ ತಮಿಳುನಾಡು ಸರ್ಕಾರ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಕಾವೇರಿ ನದಿ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಕಾವೇರಿ ನದಿಪಾತ್ರದ ರಾಜ್ಯಗಳು ಕಾನೂನು ಪಾಲನೆ ಮಾಡಬೇಕೆಂದು ಮನವಿ ಮಾಡಿದರು.

ಕಾವೇರಿ ನದಿ ನೀರು ಹೆಚ್ಚುವರಿ ಬಳಕೆ ಮಾಡಿಕೊಳ್ಳುವ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿದೆ ಎಂಬುದು ಆಧಾರರಹಿತ ಆರೋಪ. ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ ಹಣಕಾಸು ನೆರವು ಕೊಟ್ಟಿಲ್ಲ. ಇಂತಹ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು ಎಂದು ಹೇಳಿದರು.

ತಮಿಳುನಾಡು ಸರ್ಕಾರ ಮಾಡಲು ಉದೇಶಿಸಿರುವ ಈ ಯೋಜನೆ ಅಂತಾರಾಜ್ಯ ನದಿನೀರು ಹಂಚಿಕೆ ಪ್ರಾಧಿಕಾರದ ವಿರುದ್ಧದ ಯೋಜನೆಯಾಗಿದೆ. ಯಾವ ಆಧಾರದ ಮೇಲೆ ಯೋಜನೆಯನ್ನು ಆರಂಭಿಸಿದ್ದಾರೋ ಗೊತ್ತಿಲ್ಲ. ನಮಗೆ ಸಣ್ಣ ಮಾಹಿತಿಯನ್ನೂ ನೀಡದೆ ಯೋಜನೆ ಆರಂಭಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ತಮಿಳುನಾಡು ಸ್ವಾತಂತ್ರ್ಯ ಪೂರ್ವದಿಂದಲೂ ರಾಜ್ಯದ ಪ್ರತಿಯೊಂದು ನೀರಾವರಿ ಯೋಜನೆಗೂ ದುರುದ್ದೇಶಪೂರ್ವಕವಾಗಿ ಅಡ್ಡಿ ಪಡಿಸುತ್ತಲೇ ಬಂದಿದೆ. ನಮಗೆ ಎಲ್ಲಾ ಹಂತಗಳಲ್ಲೂ ವಿವಾದ ಸೃಷ್ಟಿ ಮಾಡುವುದೇ ಅವರ ಗುರಿಯಾಗಿದೆ ಎಂದರು.

ಕಾವೇರಿ ನದಿ ಹೆಚ್ಚುವರಿ ನೀರನ್ನು ಬಳಕೆ ಮಾಡಬೇಕಾದರೆ ಹೆಚ್ಚುವರಿ ನೀರಿನ ಪ್ರಮಾಣವನ್ನು ನಿಗದಿಪಡಿಸಬೇಕು. ತಮಿಳುನಾಡಿನ ಸ್ವೇಚ್ಛಚಾರವನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಹೆಚ್ಚುವರಿ ನೀರು ಬಳಸಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಕಾವೇರಿ ನದಿ ನೀರು ವಿಚಾರವಾಗಿ ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ ಎಂದು ಹಿಂದಿನ ಕೆಲವು ತೀರ್ಪುಗಳಲ್ಲಿ ನ್ಯಾಯಾಲವೇ ನಿರ್ದೇಶಿಸಿದೆ.

ಆದರೂ ತಮಿಳುನಾಡು ಸರ್ಕಾರ ಖಾಸಗಿಯವರಿಂದ ದೂರು ದಾಖಲಿಸಿದೆ. ರಾಜ್ಯ ಸರ್ಕಾರಕ್ಕೂ ಕಾನೂನು ಹೋರಾಟ ನಡೆಸುವುದು ಗೊತ್ತಿದೆ ಎಂದು ಹೇಳಿದರು. ತಮಿಳುನಾಡಿನ ಈ ಏಕಪಕ್ಷೀಯ ನಿರ್ಧಾರವನ್ನು ಸುಪ್ರೀಂಕೋರ್ಟ್‍ನಲ್ಲಿ ನಾವು ಪ್ರಶ್ನಿಸಲಿದ್ದೇವೆ. ಈಗಾಗಲೇ ಕಾನೂನು ತಜ್ಞರ ಜೊತೆ ಚರ್ಚೆಯಾಗಿದೆ ಎಂದರು.

ತಮಿಳುನಾಡು ಸರ್ಕಾರ ವೆಲ್ಲಾರು, ವಗೈ, ಗುಂಡೂರು ಯೋಜನೆಗಳಿಗೆ ಅಡ್ಡಿ ಮಾಡಿದೆ. ಕಾವೇರಿಯಲ್ಲಿರುವ ಹೆಚ್ಚುವರಿ 45 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳುವ ಯೋಜನೆ ಕಾಮಗಾರಿ ಆರಂಭಿಸಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ತೊಂದರೆಯಾಗಲಿದೆ. ಹೆಚ್ಚುವರಿ ನೀರನ್ನು ಇನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಇದನ್ನು ಹೀಗೆ ಬಳಸುವುದು ಕೂಡ ಸರಿಯಲ್ಲ.

ಕಾನೂನಿಗೆ ವಿರ್ಧುದ್ಧವಾಗಿರುವ ಈ ಯೋಜನೆಗೆ ನಮ್ಮ ವಿರೋಧವಿದೆ ಎಂದರು. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮೂರು ರಾಜ್ಯಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ನಮ್ಮ ಯೋಜನೆ ನದಿಪಾತ್ರದಿಂದ ಕೆಳಗಿರುವುದರಿಂದ ನಾವು ನೀರನ್ನು ತಿರುವು ಮಾಡಲು ಬರುವುದಿಲ್ಲ. ನ್ಯಾಯಾಲಯ ಏನು ತೀರ್ಪಿನಡಿಯಲ್ಲೇ ನಾವು ಕಾಮಗಾರಿಯನ್ನು ಆರಂಭಿಸುತ್ತೇವೆ. ಇದು ಕುಡಿಯುವ ನೀರಿನ ಯೋಜನೆಯಾಗಿದೆ ಎಂದು ಸ್ಪಷ್ಟನೆ ನೀಡಿದರು.

TRENDING