ಮೈಸೂರು, ಫೆ. 25: ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. 2021ರ ಮಾರ್ಚ್ 15 ಮತ್ತು ಜೂನ್ 17ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಮಾರ್ಚ್ 15ರಂದು ಬೆಳಗ್ಗೆ 11 ರಿಂದ 12 ರವರೆಗೆ ಅಭಿಜಿನ್ ಲಗ್ನ ಮುಹೂರ್ತದ ಸಮಯದಲ್ಲಿ ವಿವಾಹ ನಡೆಯಲಿದೆ. ಹೆಸರು ನೋಂದಾಯಿಸಿಕೊಳ್ಳಲು ಫೆಬ್ರವರಿ 28 ಕೊನೆಯ ದಿನವಾಗಿರುತ್ತದೆ. ವಧು, ವರರ ವಿವರಗಳನ್ನು ದೇವಾಲಯದಲ್ಲಿ ಮಾರ್ಚ್ 5ರಂದು ಪ್ರಕಟಿಸಲಾಗುತ್ತದೆ. ಮಾರ್ಚ್ 10ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಮಾರ್ಚ್ 12 ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.
ಜೂನ್ 17ರಂದು ನಡೆಯುವ ಸಾಮೂಹಿಕ ವಿವಾಹಕ್ಕೆ ಬೆಳಗ್ಗೆ 11 ರಿಂದ 12 ರವರೆಗೆ ಅಭಿಜಿನ್ ಲಗ್ನ ಮುಹೂರ್ತದ ಸಮಯವನ್ನು ನಿಗದಿಪಡಿಸಲಾಗಿದ್ದು, ಮೇ 31ರೊಳಗೆ ವಧು ವರರು ಹೆಸರು ನೋಂದಾಯಿಸಿಕೊಳ್ಳಬಹುದು. ದೇವಾಲಯದಲ್ಲಿ ಜೂನ್ 3ರಂದು ಹೆಸರು ಪ್ರಕಟಿಸಲಾಗುವುದು. ಜೂನ್ 13 ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.
ವರನ ಪ್ರೋತ್ಸಾಹಧನಕ್ಕೆ (ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶುಲ್ಕಕ್ಕಾಗಿ) 5,000 ರೂ. ವಧುವಿಗೆ (ಹೂವಿನಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ) 10,000 ರೂ. ಮತ್ತು ವಧುವಿಗೆ ಚಿನ್ನದ ತಾಳಿ, ಎರಡು ಗುಂಡುಗಳಿಗಾಗಿ 40,000 ರೂ. ಗಳಂತೆ ಒಟ್ಟು 55,000ರೂ. ಗಳನ್ನು ನೀಡಲಾಗುವುದು.
ಆಸಕ್ತರು ಇಲಾಖೆಯಿಂದ ವಿಧಿಸಲಾದ ಷರತ್ತುಗಳ ಹಾಗೂ ಒದಗಿಸಬೇಕಾದ ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 0821-2590027, 2590082.