Saturday, April 17, 2021
Home ಬೆಂಗಳೂರು ಬೈಕ್​ಗೆ ಕಾರು ಡಿಕ್ಕಿ: ಇಬ್ಬರು ಫೂಡ್ ಡೆಲಿವರಿ ಹುಡುಗರ ಸಾವು

ಇದೀಗ ಬಂದ ಸುದ್ದಿ

ಬೈಕ್​ಗೆ ಕಾರು ಡಿಕ್ಕಿ: ಇಬ್ಬರು ಫೂಡ್ ಡೆಲಿವರಿ ಹುಡುಗರ ಸಾವು

 ಬೆಂಗಳೂರು: ತುಮಕೂರು ರಸ್ತೆ ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ದಾರುಣ ಸಾವನ್ನಪ್ಪಿದ್ದಾರೆ. ಮೊನ್ನೆ ಮಂಗಳವಾರ ರಾತ್ರಿ 1:20 ಸಮಯದಲ್ಲಿ ಈ ಇಬ್ಬರು ಯುವಕರ ಬೈಕ್​ಗೆ ಕಾರ್​ವೊಂದು ಗುದ್ದಿ ಈ ದುರಂತ ಘಟಿಸಿದೆ. ಸಾವನ್ನಪ್ಪಿದ ಯುವಕರು ಗೌತಮ್ ಮತ್ತು ಶ್ರೀಕಾಂತ್. ಇವರಿಬ್ಬರೂ ಸ್ವಿಗ್ಗಿ ಸಂಸ್ಥೆಗೆ ಫೂಡ್ ಡೆಲಿವರಿ ಬಾಯ್​ಗಳಾಗಿ ಕೆಲಸ ಮಾಡುತ್ತಿದ್ದರು. ದುರಂತ ಸಂಭವಿಸಿದ ಹೊತ್ತಿನಲ್ಲೂ ಅವರು ಫೂಡ್ ಡೆಲಿವರಿ ಕಾರ್ಯದಲ್ಲೇ ಇದ್ದರೆನ್ನಲಾಗಿದೆ.

ಫುಡ್ ಡೆಲಿವರಿ ಬಾಯ್​ಗಳಾಗಿ ಹಗಲು ರಾತ್ರಿ ಎನ್ನದೆ ಪ್ರತಿನಿತ್ಯ ಹತ್ತಾರು ಮನೆಗಳಿಗೆ ಹೋಗಿ ಊಟ ಕೊಡುತ್ತಿದ್ದ ಈ ಯುವಕರಿಗೆ ಮಂಗಳವಾರ ರಾತ್ರಿ ಜವರಾಯ ನಡುರಸ್ತೆಯಲ್ಲಿ ಕಾದು ಕುಳಿತಿದ್ದ. ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್​ಮೆಂಟ್​ನಲ್ಲಿ ಊಟವನ್ನ ಡೆಲಿವರಿ ಮಾಡಿದ್ಧಾರೆ. ಊಟ ಕೊಟ್ಟು ವಾಪಸ್ ತುಮಕೂರು ರಸ್ತೆ ಕಡೆಗೆ ಹೊರಡಬೇಕು ಅನ್ನೋಷ್ಟರಲ್ಲಿ ವೇಗವಾಗಿ ಬಂದ ಕಾರು ಇಬ್ಬರು ಯುವಕರನ್ನ ಬಲಿ ಪಡೆದಿದೆ. ಬೈಕ್​ನಲ್ಲಿ ನಿಧಾನವಾಗಿ ರಸ್ತೆಗೆ ಪಾಸ್ ಅಗುತ್ತಿದ್ದ ಈ ಇಬ್ಬರು ಯುವಕರ ಬೈಕ್​ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಮ್ ಎನ್ನುವಂತೆ ಮಾಡಿದೆ‌. ಈ ಬಾರಿಯೂ ಕೊಡಗಿಗೆ ತಪ್ಪಿದ್ದಲ್ಲ ಪ್ರವಾಹ ಕಂಟಕ?; ಮಳೆಗಾಲ ಆರಂಭಕ್ಕೂ ಮುನ್ನವೇ ಎನ್​ಡಿಆರ್​ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆಯ ಅಭ್ಯಾಸ

ವೇಗವಾಗಿ ಬಂದ ಕಾರು ಬೈಕ್​ನ ಹಿಂಬದಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಇಬ್ಬರು ಸವಾರರು ಕ್ಷಣಮಾತ್ರದಲ್ಲಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದಾರೆ. ಡಿಕ್ಕಿ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತ ಯುವಕರು ಮಂಜುನಾಥ ನಗರ ನಿವಾಸಿಗಳಾಗಿದ್ದಾರೆ.

ವೇಗವಾಗಿ ಕಾರು ಚಲಾಯಿಸಿ ಅಪಘಾತ ಎಸಗಿದ ಕಾರು ಪತ್ತೆಯಾಗಿಲ್ಲ. ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಮತ್ತು ಚಾಲಕನಿಗಾಗಿ ಶೋಧ ನಡೆಸಿದ್ದಾರೆ. ಇನ್ನೂ ಅಪಘಾತದ ತೀವ್ರತೆಗೆ ಯುವಕರಿದ್ದ ಬೈಕ್ ಸಂಪೂರ್ಣ ಜಖಂ ಆಗಿದೆ.

 ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ರಸ್ತೆ ಉಬ್ಬುಗಳನ್ನ ತೆರವು ಮಾಡಿದ್ದು ವಾಹನಗಳು ವೇಗವಾಗಿ ಚಲಾಯಿಸುತ್ತಾರಂತೆ. ಅದ್ರಿಂದ ಆಗಾಗ ಈ ರಸ್ತೆಯಲ್ಲಿ ಅಪಘಾಗಳು ಅಗುತ್ತಿವೆ ಎಂಬುದು ಸ್ಥಳೀಯರ ಆರೋಪ. ಸಿಸಿಟಿವಿ ದೃಶ್ಯಗಳನ್ನ ಸ್ಥಳೀಯರು ಸಹ ನೋಡಿದ್ದು ಅಪಘಾತದ ತೀವ್ರತೆ ಕಂಡು ಬೆಚ್ಚಿ ಬಿದ್ದಿದ್ದಾರೆ.ಅದೇನೇ ಇರಲಿ ಯಾರದ್ದೋ ತಪ್ಪಿಗೆ ಊಟ ಕೊಡಲು ಹೋದ ಇಬ್ಬರು ಯುವಕರು ದಾರುಣವಾಗಿ ರಸ್ತೆಯಲ್ಲಿ ಹೆಣವಾಗಿದ್ದು ದುರಂತವೇ ಸರಿ. ಇನ್ನಾದರೂ ಬಿಬಿಎಂಪಿ ಮತ್ತು ಪೊಲೀಸರು ರಸ್ತೆಯಲ್ಲಿ ಅಪಘಾತ ತಡೆಗೆ ಕ್ರಮ ಕೈಗೊಳ್ತಾರಾ ಕಾದು ನೋಡಬೇಕಿದೆ.

TRENDING