ಶ್ರೀರಂಗಪಟ್ಟಣ: ಹಾಸನದ ಕೆಎಸ್ಆರ್ಪಿ 11ನೇ ಪಡೆಯ ಮುಖ್ಯಪೇದೆಯೊಬ್ಬರು ಮೈಸೂರು ಜಿಲ್ಲೆ ಶ್ರೀರಂಗಪಟ್ಟಣದ ಲಾಡ್ಜ್ವೊಂದರಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ.
ಮುಖ್ಯಪೇದೆ ಸುರೇಶ್(40) ಮೃತರು. ಇವರು ಮಂಗಳವಾರ ರಾತ್ರಿ ಶ್ರೀರಂಗಪಟ್ಟಣಕ್ಕೆ ಆಗಮಿಸಿ ಸಮೀಪದ ಪಶ್ಚಿಮವಾಹಿನಿಯ ಲಾಡ್ಜ್ನಲ್ಲಿ ತಂಗಿದ್ದರು. ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಘಟನೆ ನಡೆದ ಸ್ಥಳದಲ್ಲೇ ಪತ್ತೆಯಾಗಿದೆ.
ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಂಗಳವಾರ ರಾತ್ರಿ ಲಾಡ್ಜ್ ಒಳಗೆ ಹೋದವರು ಬುಧವಾರ ಮಧ್ಯಾಹ್ನವಾದರೂ ರೂಂನಿಂದ ಹೊರ ಬಂದಿರಲಿಲ್ಲ. ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
‘ಅನಾರೋಗ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಿ’ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಅರುಣ್ಗೌಡ, ಸಿಪಿಐ ಡಿ.ಯೋಗೇಶ್, ಪಿಎಸ್ಐ ರೇಖಾ ಪರಿಶೀಲನೆ ನಡೆಸಿದರು. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.