ಚಿಕ್ಕಬಳ್ಳಾಪುರ: ಆರು ಮಂದಿಯನ್ನು ಬಲಿ ಪಡೆದ ಚಿಕ್ಕಬಳ್ಳಾಪುರದ ಹಿರೇನಾಗವೇರಿ ಗ್ರಾಮದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಐವರನ್ನು ಬಂಧಿಸಿದ್ದು, ಇನ್ನೂ ಒಂಬತ್ತು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸಲು ಮೂರು ತಂಡಗಳನ್ನು ರಚಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಆದೇಶಿಸಿದ್ದರು. ಅದರಂತೆ ಕೇಂದ್ರ ಶ್ರೇಣಿಯ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಎಂ.ಚಂದ್ರಶೇಖರ್ ಅವರು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರ ನೇರ ಮೇಲ್ವಿಚಾರಣೆಯಲ್ಲಿ ಮೂರು ತಂಡಗಳನ್ನು ರಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ರೆಡ್ಡಿ, ವೆಂಕಟಶಿವ ರೆಡ್ಡಿ, ಪ್ರವೀಣ್, ರಿಯಾಜ್ ಮತ್ತು ಮಧುಸೂಧನ್ ಎಂಬ ಐವರನ್ನು ಬಂಧಿಸಲಾಗಿದೆ ಎಂದು ಚಂದ್ರಶೇಖರ್ ಅವರು ಇಂದು ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರದ ವಿವಿಧ ಭಾಗಗಳಿಂದ ಮತ್ತು ಇತರ ಸ್ಥಳಗಳಿಂದ ಐದು ಆರೋಪಿಗಳನ್ನು ತಂಡ ಬಂಧಿಸಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಭ್ರಮರಾ ವಾಸಿನಿ ಸ್ಟೋನ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದ ಜೆಲ್ಲಿ ಕ್ರಷರ್ ನಲ್ಲಿ ಸೋಮವಾರ ರಾತ್ರಿ 12:30ರ ಸುಮಾರಿಗೆ ದುರಂತ ಸಂಭವಿಸಿದ್ದು, ಘಟನೆಗೆ ಜಿಲೆಟಿನ್ ಕಡ್ಡಿಗಳ ಸ್ಫೋಟವೇ ಕಾರಣ ಎಂದು ತಿಳಿದುಬಂದಿದೆ.