ನವದೆಹಲಿ: ಭಾರತದಲ್ಲಿ ಕೊರೋನಾ 2ನೇ ಅಲೆ ಆತಂಕ ಶುರುವಾಗಿದ್ದು, ದೇಶದ ಕೆಲವು ರಾಜ್ಯಗಳಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಕೇರಳದಲ್ಲಿ ಒಂದೇ ದಿನ ಎರಡೂವರೆ ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಮಹಾರಾಷ್ಟ್ರ ಒಂದು ರಾಜ್ಯದಲ್ಲಿಯೇ 6 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಕೇವಲ ಈ ಎರಡು ರಾಜ್ಯಗಳಲ್ಲಿ ಅಷ್ಟೇ ಅಲ್ಲದೆ. ಛತ್ತೀಸ್ಗಢ, ಮಧ್ಯಪ್ರದೇಶ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.
ಮಹಾರಾಷ್ಟ್ರದಲ್ಲಿ ಸೋಮವಾರ 5,210 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರ 6,218 ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 21,12,312ಕ್ಕೆ ಏರಿಕೆಯಾಗಿದೆ. ಇನ್ನು ನಿನ್ನೆ ಒಂದೇ ದಿನ 51 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 51,857ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.