Sunday, February 28, 2021
Home ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ: ಎಸ್ಪಿ ಮಿಥುನ್ ವಿರುದ್ಧ ಸಿದ್ದರಾಮಯ್ಯ ಫುಲ್ ಗರಂ

ಇದೀಗ ಬಂದ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ: ಎಸ್ಪಿ ಮಿಥುನ್ ವಿರುದ್ಧ ಸಿದ್ದರಾಮಯ್ಯ ಫುಲ್ ಗರಂ

ಚಿಕ್ಕಬಳ್ಳಾಪುರ: ಜಿಲೆಟಿನ್​ ಸ್ಫೋಟಗೊಂಡು 6 ಮಂದಿ ದುರ್ಮರಣಕ್ಕೀಡಾದ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡ ಮಂಗಳವಾರ ಸಂಜೆ ಭೇಟಿ ನೀಡಿತು.

ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಜಿಲೆಟಿನ್ ಕಡ್ಡಿ ಹೇಗೆ ತಂದ್ರು? ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಸ್ಪಿ ಮಿಥುನ್ ಕುಮಾರ್​ರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ಯಾವ ಯಾವ ಕೇಸ್ ದಾಖಲಿಸಿದ್ದೀರಿ? ಎಷ್ಟು ಜನರನ್ನ ಅರೆಸ್ಟ್ ಮಾಡಿದ್ದೀರಿ? ಸರಿಯಾಗಿ ಆಕ್ಟ್ ಓದಿಕೊಂಡಿದ್ದೀಯಾ? ಎಂದು ತರಾಟೆಗೆ ತೆಗೆದುಕೊಂಡರು.

ಸ್ಫೋಟ ಪ್ರಕರಣ ಸಂಬಂಧ ನಾಲ್ಕು ಜನರನ್ನ ಅರೆಸ್ಟ್ ಮಾಡಿದ್ದೀವಿ ಎಂದು ಎಸ್ಪಿ ಉತ್ತರಿಸುತ್ತಿದ್ದಂತೆ, ಉಳಿದವರನ್ನ ಯಾವಾಗ್ರಿ‌ ಮಾಡ್ತೀರಿ? ಗಣಿಗಾರಿಕೆಗೆ ಎಷ್ಟು ಜನ ಲೈಸೆನ್ಸ್ ತೆಗೆದುಕೊಂಡಿದ್ದಾರೆ? ಈ ಎಲ್ಲವೂ ಮಾಹಿತಿ ಕೊಂಡಿ ಎಂದು ಖಾರವಾಗಿಯೇ ಕೇಳಿದರು.

 ಸ್ಫೋಟ‌ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ, ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಹಾಗೂ ಎಸ್ಪಿ ಮಿಥುನ್ ಕುಮಾರ್ ಬಳಿ ಮಾಹಿತಿ ಪಡೆಯುತ್ತಿದ್ದರು. ಜತೆಗೆ ಅಕ್ರಮ ಗಣಿಗಾರಿಕೆಗೆ ಏಕೆ ಬಿದ್ದಿಲ್ಲ, ಎಲ್ಲವೂ ಪರವಾನಗಿ ಮೂಲಕವೇ ನಡೆಯುತ್ತಿದ್ಯಾ? ಎಂದು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸಾಥ್ ನೀಡಿದರು.

ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ನಡೆದ ಗಣಿ ಸ್ಫೋಟ ದುರಂತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಮಧ್ಯರಾತ್ರಿ ಜಿಲೆಟಿನ್​ ಸ್ಫೋಟಗೊಂಡಿದೆ. ಪರಿಣಾಮ ಭ್ರಮರವಾಸಿನಿ ಕ್ರಷರ್ ಹಾಗೂ ಶಿರಡಿ ಸಾಯಿ ಕ್ರಷರ್ ನ ಮೈನ್ಸ್ ಮ್ಯಾನೇಜರ್ ಉಮಾಕಾಂತ್, ಕಂಪ್ಯೂಟರ್ ಅಪರೇಟರ್ ಗಂಗಾಧರ್, ಅಕೌಂಟೆಂಟ್ ಅಭಿ ಅಲಿಯಾಸ್ ಅಭಿಲಾಷ್, ನೇಪಾಳ ಮೂಲದ ವಾಚ್ ಮೆನ್ ಮಹೇಶ್ ಸಿಂಗ್, ಸ್ಥಳೀಯ ಹಿರೇನಾಗವಲ್ಲಿ ಮೂಲದ ರಾಮು ಸೇರಿದಂತೆ ಮತ್ತೋರ್ವ ವೇಯರ್ ಮುರುಳಿ ಮೃತಪಟ್ಟಿದ್ದಾರೆ. ಇವರ ದೇಹಗಳು ಛಿದ್ರಛಿದ್ರವಾಗಿ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಟಾಟಾ ಏಸ್ ಚಾಲಕ ರಿಯಾಜ್ ಗಾಯಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ.

TRENDING