Saturday, February 27, 2021
Home ಜಿಲ್ಲೆ ರಾಮನಗರ ಕಲ್ಲು ಗಣಿ ಸ್ಪೋಟಕ್ಕೆ ಸರ್ಕಾರದ ಬೇಜಾಬ್ದಾರಿ ಕಾರಣ :ಎಚ್‌ಡಿ ಕುಮಾರಸ್ವಾಮಿ ಕಿಡಿ

ಇದೀಗ ಬಂದ ಸುದ್ದಿ

ಕಲ್ಲು ಗಣಿ ಸ್ಪೋಟಕ್ಕೆ ಸರ್ಕಾರದ ಬೇಜಾಬ್ದಾರಿ ಕಾರಣ :ಎಚ್‌ಡಿ ಕುಮಾರಸ್ವಾಮಿ ಕಿಡಿ

ರಾಮನಗರ, ಫೆ 23: ರಾಜ್ಯ ಸರ್ಕಾರದ ಬೇಜಾಬ್ದಾರಿತನ ಹಾಗೂ ಅಧಿಕಾರಿಗಳ ಪ್ರೋತ್ಸಾಹದಿಂದ ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟ ಪ್ರಕರಣ ನಡೆದಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ರಾಮನಗರದ ವಡೇರಹಳ್ಳಿ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ವೀರಾಂಜನೇಯ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರದಲ್ಲಿ ಜನರ ಜೀವದ ಬಗ್ಗೆ ಕಮಿಟ್ಮೆಂಟ್ ಇಲ್ಲ, ಪ್ರಕರಣ ನಡೆದಾಗ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ಕೊಡ್ತಾರೆ ಅಷ್ಟೇ. ಅಲ್ಲದೇ ಒಂದು ವಾರದ ಮುಂಚೆಯೇ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆದರೂ ಈ ಘಟನೆ ನಡೆದಿದೆ ಅಂದರೆ ಇವರಿಗೆ ಮೊದಲೇ ಗೊತ್ತಿತ್ತು ಅನಿಸುತ್ತದೆ ಎಂದು ಘಟನೆಯ‌ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಸಂಶಯ ವ್ಯಕ್ತಪಡಿಸಿದರು.

ರಾಜ್ಯದ ಜನಪ್ರತಿನಿಧಿಗಳೇ ಇಂದು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ, ಈ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮವಹಿಸಬೇಕು. ಇಡೀ ರಾಜ್ಯದಲ್ಲಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಹೆಚ್ಚಿನ ಹಣ ಸಿಗಲಿದೆ ಎಂದು ಅಧಿಕಾರಿಗಳು ವ್ಯಾಮೋಹಕ್ಕೆ ಒಳಗಾಗಿದ್ದಾರೆ, ರಾಜಕಾರಣಿಗಳ ಒತ್ತಡದಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಗಂಭೀರ ಆರೋಪ ಮಾಡಿದರು.

ಇನ್ನು ರಾಜ್ಯ ಸರಕಾರದ ಭ್ರಷ್ಟಾಚಾರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಈ ಸರ್ಕಾರ ಹಣ ಲೂಟಿ ಮಾಡುವುದನ್ನು ಬಿಟ್ಟು ಬೇರೇನೂ ಮಾಡ್ತಿಲ್ಲ. ಭ್ರಷ್ಟಾಚಾರವನ್ನು ನಾವು ತಡೆಯುತ್ತೇವೆಂದು ಪ್ರಧಾನಿಗಳು ವೆಸ್ಟ್ ಬೆಂಗಾಲ್ ನಲ್ಲಿ ಭಾಷಣ ಮಾಡ್ತಾರೆ, ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.

ಈ ಸರ್ಕಾರದಲ್ಲಿ ಹಣ ಇಲ್ಲದೇ ಯಾವುದೇ ಫೈಲ್ ಮೂವ್ ಆಗಲ್ಲ ಎಂದು ಮೈತ್ರಿ ಸರ್ಕಾರ ತೆಗೆದವರೇ ಇಂದು ಹೇಳುತ್ತಿದ್ದಾರೆ. ಇದೇ ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

TRENDING