Saturday, February 27, 2021
Home ದೆಹಲಿ ಕೃಷಿ ಕಾಯ್ದೆ ಪ್ರತಿಭಟನೆ: 3 ತಿಂಗಳಲ್ಲಿಯೇ 248 ರೈತರ ಸಾವು - ಎಸ್‌ಕೆಎಂ

ಇದೀಗ ಬಂದ ಸುದ್ದಿ

ಕೃಷಿ ಕಾಯ್ದೆ ಪ್ರತಿಭಟನೆ: 3 ತಿಂಗಳಲ್ಲಿಯೇ 248 ರೈತರ ಸಾವು – ಎಸ್‌ಕೆಎಂ

ನವದೆಹಲಿ, ಫೆ.  22: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ರೈತರ ಪ್ರತಿಭಟನೆಯ ವೇಳೆ 87 ದಿನಗಳಲ್ಲಿಯೇ 248 ರೈತರು ಅಸುನೀಗಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಂಗ್ರಹಿಸಿದ ದಾಖಲೆಗಳು ತಿಳಿಸಿವೆ.

ಪ್ರತಿಭಟನೆ ಸಂದರ್ಭದಲ್ಲಿ ಜೀವ ಕಳೆದುಕೊಂಡ ರೈತರಲ್ಲಿ 202 ಮಂದಿ ಪಂಜಾಬ್‌ನವರಾಗಿದ್ದಾರೆ. 36 ಮಂದಿ ಹರ್ಯಾಣ, ಆರು ಮಂದಿ ಉತ್ತರ ಪ್ರದೇಶದ ರೈತರಾಗಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಾಖಂಡದ ತಲಾ ಒಬ್ಬರು ರೈತರು ಮೃತಪಟ್ಟಿದ್ದಾರೆ.

ಇವುಗಳಲ್ಲಿ ಹೆಚ್ಚಿನ ಸಾವುಗಳು ಚಳಿಯ ವಾತಾವರಣದಿಂದ ಉಂಟಾದ ಹೃದಯಾಘಾತ, ಅನಾರೋಗ್ಯದಿಂದ ಸಂಭವಿಸಿದ್ದರೆ, ಇನ್ನು ಕೆಲವು ಅಪಘಾತದಿಂದ ಉಂಟಾಗಿವೆ. ನವೆಂಬರ್ 26, 2020ರ ಅವಧಿಯಿಂದ 2021ರ ಫೆಬ್ರವರಿ 20ರವರೆಗಿನ ದಾಖಲೆಗಳು ಈ ಮಾಹಿತಿ ನೀಡಿವೆ. 18 ರಿಂದ 85 ವರ್ಷದ ಎಲ್ಲ ವಯೋಮಾನದ ರೈತರೂ ಮೃತಪಟ್ಟಿದ್ದಾರೆ. ಮುಂದೆ ಓದಿ.


ವಾರಕ್ಕೆ ಸರಾಸರಿ 5 ಆತ್ಮಹತ್ಯೆ

ಕಳೆದ ವರ್ಷ ಪಂಜಾಬ್‌ನಲ್ಲಿ 261 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಮೋರ್ಚಾ ಮಾಹಿತಿ ನೀಡಿದೆ. ಕಳೆದ ವರ್ಷ ವಾರಕ್ಕೆ ಸರಾಸರಿ ಐದು ಮಂದಿಯಂತೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿ ಗಡಿ ಹಾಗೂ ಪಂಜಾಬ್‌ನ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ನವೆಂಬರ್ 26 ರಿಂದ ಫೆ. 19ರವರೆಗೆ ವಾರಕ್ಕೆ ಸರಾಸರಿ 16 ರೈತರು ಜೀವ ಕಳೆದುಕೊಂಡಿದ್ದಾರೆ.

ಚಳಿಯಿಂದ ಹೆಚ್ಚು ಸಾವು

ಈ ವರ್ಷದ ಜನವರಿಯಲ್ಲಿ ಚಳಿ ತೀವ್ರಮಟ್ಟಕ್ಕೆ ಹೋಗಿದ್ದಾಗ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 120 ರೈತರು ಮರಣ ಹೊಂದಿದ್ದಾರೆ. ಇವರಲ್ಲಿ 108 ಮಂದಿ ಪಂಜಾಬ್‌ನವರೇ ಆಗಿದ್ದಾರೆ. ದೆಹಲಿ ಗಡಿ ಭಾಗದ ಪ್ರತಿಭಟನಾ ಸ್ಥಳಕ್ಕೆ ಹೋಗುವಾಗ ಅಥವಾ ಅಲ್ಲಿಂದ ಬರುವಾಗ ಸಂಭವಿಸಿದ ಅಪಘಾತಗಳಲ್ಲಿ ಹೆಚ್ಚಿನವರು ಮೃತಪಟ್ಟಿದ್ದಾರೆ.

ಈ ತಿಂಗಳ ಫೆಬ್ರವರಿ 19ರವರೆಗೂ ಪಂಜಾಬ್‌ನ 41 ರೈತರು ಮೃತಪಟ್ಟಿದ್ದರೆ, ಇತರೆ ರಾಜ್ಯಗಳ ಸುಮಾರು 10 ಮಂದಿ ರೈತರು ಜೀವ ಕಳೆದುಕೊಂಡಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಂಜಾಬ್‌ನ 48, ಹರ್ಯಾಣದ ಸುಮಾರು 10 ಮೃತಪಟ್ಟಿದ್ದರು. ರೈತ ಸಂಘಟನೆಗಳು ಪಂಜಾಬ್‌ನಿಂದ ದೆಹಲಿಗೆ ನವೆಂಬರ್ 26ರಂದು ಮೆರವಣಿಗೆ ಆರಂಭಿಸಿದ ದಿನದಿಂದ ನವೆಂಬರ್ 30ರವರೆಗೆ ಐವರು ಬಲಿಯಾಗಿದ್ದರು.

ಇದೆಲ್ಲ ಸರ್ಕಾರ ನಡೆಸಿದ ಕೊಲೆಗಳು

‘ಈ ಸಾವುಗಳೆಲ್ಲವೂ ಕೊಲೆಗಳು. ರೈತರು ದೆಹಲಿಯ ಗಡಿಗಳನ್ನು ತಲುಪಿದ ಒಂದು ವಾರದೊಳಗೆ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು. ಆದರೆ ತನ್ನದೇ ಜನರ ಬಗ್ಗೆ ಸರ್ಕಾರ ಉದಾಸೀನ ತೋರಿಸಿದೆ’ ಎಂದು ಭಾರತೀಯ ಕಿಸಾನ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಆರೋಪಿಸಿದ್ದಾರೆ.

TRENDING