ಮುಂಬೈ, ಫೆ. 22: ದಾದ್ರಾ ಹಾಗೂ ನಗರ್ ಹವೇಲಿ ಸಂಸದ ಮೋಹನ್ಭಾಯ್ ಡೇಲ್ಕರ್ (58) ಅವರು ದಕ್ಷಿಣ ಮುಂಬೈನ ಹೋಟೆಲ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಸದರಾಗಿದ್ದ ಮೋಹನ್ ಭಾಯ್, ದಕ್ಷಿಣ ಮುಂಬೈನ ಮರೈನ್ ಡ್ರೈವ್ನಲ್ಲಿನ ಸೀ ಗ್ರೀನ್ ಹೋಟೆಲ್ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ಗುಜರಾತಿ ಭಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಡೇಲ್ಕರ್ ಭಾರತೀಯ ನವಶಕ್ತಿ ಪಕ್ಷದವರಾಗಿದ್ದರು. ಸಿಲ್ವಸ್ಸಾದಲ್ಲಿ ಜನಿಸಿದ್ದ ಮೋಹನ್ಭಾಯ್ ವೃತ್ತಿಯಿಂದ ಕೃಷಿಕರಾಗಿದ್ದರು.
ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವರ್ತಕರ ಸಂಘಟನೆಯ ನಾಯಕರಾಗಿದ್ದ ಮೋಹನ್ಭಾಯ್, ದಾದ್ರಾ ಹಾಗೂ ನಗರ್ ಹವೇಲಿ ಕ್ಷೇತ್ರದಿಂದ 9ನೇ ಲೋಕಸಭೆಗೆ 1989ರಲ್ಲಿ ಆಯ್ಕೆಯಾಗಿದ್ದರು. 1989ರಿಂದ 2009ರವರೆಗೆ ಸತತ ಆರು ಚುನಾವಣೆಯಲ್ಲಿ ಜಯಗಳಿಸಿದ್ದರು. ಇದಾಗ್ಯೂ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದರು. ಆದರೆ 17ನೇ ಲೋಕಸಭೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಯಶಸ್ವಿಯಾಗಿದ್ದರು.