Monday, March 8, 2021
Home ಸುದ್ದಿ ಜಾಲ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಒಕ್ಕಲಿಗರ ಮೀಸಲಾತಿ ಹೋರಾಟ ಕುರಿತು ಇಂದು ಮಹತ್ವದ ಸಭೆ

ಇದೀಗ ಬಂದ ಸುದ್ದಿ

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಒಕ್ಕಲಿಗರ ಮೀಸಲಾತಿ ಹೋರಾಟ ಕುರಿತು ಇಂದು ಮಹತ್ವದ ಸಭೆ

ಬೆಂಗಳೂರು,ಫೆ.22- ಒಕ್ಕಲಿಗರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮೀಸಲಾತಿ ಹೆಚ್ಚಳಕ್ಕಾಗಿ ಸರ್ಕಾರವನ್ನು ಆಗ್ರಹಿಸುವ ಸಂಬಂಧ ಇಂದು ಸಂಜೆ ಮಹತ್ವದ ಸಭೆ ನಡೆಯಲಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಇಂದು ಸಂಜೆ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸಭೆ ಜರುಗಲಿದೆ.

ಸಮುದಾಯದ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದು, ಪ್ರಾಧಿಕಾರ ಸ್ಥಾಪನೆ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ರೂಪುರೇಷೆ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ. ಪ್ರಾಧಿಕಾರ ಸ್ಥಾಪನೆ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶ್ರೀಗಳ ನೇತೃತ್ವದಲ್ಲಿ ಇಂದು ನಡೆಯುವ ಸಭೆ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ.

ಮೊದಲಿಗೆ ಸಮುದಾಯದ ಈ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ.

ಆನಂತರ ಸರ್ಕಾರ ಕೈಗೊಳ್ಳುವ ತೀರ್ಮಾನವನ್ನು ಆಧರಿಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧರಿಸಲಾಗುತ್ತದೆ. ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಮುಂಬರುವ ಬಜೆಟ್‍ನಲ್ಲಿ ಸಾಕಷ್ಟು ಹಣ ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು, ಅದೇ ರೀತಿ ಒಕ್ಕಲಿಗ ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಅನುಕೂಲ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ.

ಈಗಾಗಲೇ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಿ ಎರಡು ಸಮಿತಿಗಳನ್ನು ರಚಿಸಲಾಗಿದ್ದು, ಆ ಸಮಿತಿಗಳು ಮೀಸಲಾತಿ ಹೆಚ್ಚಳ ಹಾಗೂ ಪ್ರಾಧಿಕಾರ ರಚನೆಯ ರೂಪುರೇಷೆ ಕುರಿತಂತೆ ಪರಾಮರ್ಶಿಸಿದ್ದು ಇಂದಿನ ಸಭೆಗೆ ಪೂರಕ ಮಾಹಿತಿಯನ್ನು ಒದಗಿಸಲಿವೆ. ಮಾಹಿತಿ ಆಧರಿಸಿ ಸಮಗ್ರ ಚರ್ಚೆ ನಡೆಸಿದ ನಂತರ ಸರ್ಕಾರಕ್ಕೆ ಸಲ್ಲಿಸಬೇಕಿರುವ ಮನವಿ ಪತ್ರವನ್ನು ಅಂತಿಮಗೊಳಿಸಲಾಗುತ್ತದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

TRENDING