Tuesday, March 9, 2021
Home ಅಂತರ್ ರಾಜ್ಯ ಉನ್ನಾವೋ ಬಾಲಕಿಯರ ಸಾವು ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಇದೀಗ ಬಂದ ಸುದ್ದಿ

ಉನ್ನಾವೋ ಬಾಲಕಿಯರ ಸಾವು ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

 ಲಖನೌಉನ್ನಾವೋ ಬಾಲಕಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಹಳ್ಳಿಯೊಂದರಲ್ಲಿ ಎರಡು ದಿನಗಳ ಹಿಂದಷ್ಟೇ ಮೇವು ತರಲು ಹೋದ ಮೂವರು ದಲಿತ ಬಾಲಕಿಯರಲ್ಲಿ ಇಬ್ಬರು ಕೊಲೆಯಾಗಿದ್ದು, ಬದುಕುಳಿದಿದ್ದ ಮತ್ತೊಬ್ಬ ಬಾಲಕಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶನಿವಾರ ವೆಂಟಿಲೇಟರ್ ತೆಗೆಯಲಾಗಿತ್ತು. ಕಳೆದ ಬುಧವಾರ ಉನ್ನಾವೋದ ಬಾಬುಹಾರ ಗ್ರಾಮದಲ್ಲಿ 16, 15, 14 ವರ್ಷದ ಮೂವರು ಬಾಲಕಿಯರ ಪೈಕಿ ಇಬ್ಬರು ಶವವಾಗಿ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿ ಜೀವನ್ಮರಣದ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಪ್ರಕರಣದ ಪ್ರಮುಖ ಆರೋಪಿಗಳಾದ ವಿನಯ್ ಅಲಿಯಾಸ್ ಲಂಬು ಮತ್ತು ಆತನ ಸ್ನೇಹಿತನನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದೆ ಎಂದು ಎಎಸ್ ಪಿ ವಿಕೆ ಪಾಂಡೇ ತಿಳಿಸಿದ್ದಾರೆ. ಪ್ರೀತಿ ನಿರಾಕರಿಸಿದ ವಿಚಾರವಾಗಿ ಪ್ರಮುಖ ಆರೋಪಿ ನವೀನ್ ಬಾಲಕಿಯರಿಗೆ ವಿಷ ನೀಡಿದ್ದ ಎನ್ನಲಾಗಿದೆ. ಇನ್ನು ಪ್ರಕರಣದ ಆರೋಪಿಗಳಲ್ಲಿ ಓರ್ವ ಅಪ್ರಾಪ್ತ ಎನ್ನಲಾಗಿತ್ತಾದರೂ ಆತನ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದಾಗ ಆತ ಅಪ್ರಾಪ್ತನಲ್ಲ ಎಂಬುದು ತಿಳಿದುಬಂದಿದೆ.

ಏನಿದು ಪ್ರಕರಣ
ಮೇವು ತರಲು ಹೋದ ಇಬ್ಬರು ದಲಿತ ಬಾಲಕಿಯರು ಹೊಲದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬುಧವಾರ ನಡೆದಿದೆ. ಇವರ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 13, 16 ಹಾಗೂ 17 ವಯಸ್ಸಿನ ಮೂವರು ಅಕ್ಕ ತಂಗಿಯರು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಾನುವಾರುಗಳಿಗೆ ಮೇವು ತರಲು ಹೊಲದ ಬಳಿ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಯಾರೂ ಮರಳಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯವರು ಹೋಗಿ ನೋಡಿದಾಗ, ಮೂವರು ಹೊಲದಲ್ಲಿ ಬಿದ್ದಿದ್ದರು. ಈ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿ ಸ್ಥಿತಿ ಗಂಭೀರವಾಗಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ಬಾಲಕಿಯರ ದೇಹದಲ್ಲಿ ವಿಷದ ಅಂಶವಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಪ್ರೀತಿ ನಿರಾಕರಿಸಿದ ಕಾರಣ ನೀರಿನಲ್ಲಿ ಕೀಟನಾಶಕ ಬೆರೆಸಿ ಕೊಲೆ!
ಪ್ರೀತಿ ನಿರಾಕರಿಸಿದ, ಫೋನ್ ನಂಬರ್ ನೀಡಲು ನಿರಾಕರಿಸಿ 18ರ ಯುವತಿಯನ್ನು ಕೊಲೆಗೈಯಲು ಪ್ಲಾನ್ ಮಾಡಿದ ಆರೋಪಿ ವಿನಯ್ ಅಲಿಯಾಸ್ ಲಂಬು ಇದೀಗ ಪೊಲೀಸ ಅತಿಥಿಯಾಗಿದ್ದಾನೆ. ಬಾಲಕಿಯರ ಕುಟುಂಬದ ಗದ್ದೆ ಬಳಿ ಆರೋಪಿ ವಿನಯ್ ಗದ್ದೆ ಕೂಡ ಇತ್ತು. ಹೀಗಾಗಿ ಬಾಲಕಿಯರು ಜಾನುವಾರುಗಳಿಗೆ ಮೇವು, ಗದ್ದೆ ಕೆಲಸಕ್ಕೆ ತೆರಳಿದಾಗ, ಈ ಆರೋಪಿ ವಿನಯ್ ಕಾದು ಕುಳಿತು 18ರ ಯುವತಿ ಬಳಿ ಮಾತನಾಡುತ್ತಿದ್ದ. ಫೋನ್ ನಂಬರ್ ಹಂಚಿಕೊಳ್ಳಲು ವಿನಯ್ ಹೇಳಿದ್ದಾರೆ. ಇದಕ್ಕೆ 18ರ ಬಾಲಕಿ ನಿರಾಕರಿಸಿದ್ದಾರೆ. ತನ್ನ ಪ್ರೀತಿ ನಿರಾಕರಿಸುತ್ತಿದ್ದಾಳೆ ಎಂದು ಅರಿತ ವಿನಯ್, 18ರ ಬಾಲಕಿಯನ್ನು ಕೊಲೆಗೈಯಲು ನಿರ್ಧರಿಸಿದ್ದಾನೆ.

ಮೂವರು ಬಾಲಕಿಯರು ಗದ್ದೆಗೆ ಬಂದು ಮೇವು ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ. ದಣಿದಾಗ ತಾವು ತಂದಿದ್ದ ತಿಂಡಿಯನ್ನು ತೆಗೆದು ಸೇವಿಸಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಕಾದು ಕುಳಿತ ವಿನಯ್, ತನ್ನ ಸ್ನೇಹಿತನಿಂದ ತಿಂಡಿ ತರಿಸಿ ಈ ಇಬ್ಬರು ಬಾಲಕಿ ಹಾಗೂ ಯುವತಿಯರ ಜೊತೆ ಸೇವಿಸಿದ್ದಾನೆ. ಬಳಿಕ ಈ ಯುವತಿಗೆ ಕೀಟನಾಶಕ ಬೆರೆಸಿದ ನೀರನ್ನು ಕುಡಿಯಲು ನೀಡಿದ್ದಾನೆ. 18ರ ಯುವತಿ ನೀರು ಕುಡಿದ ಬೆನ್ನಲ್ಲೇ, ಆಕೆಯ ತಂಗಿಯರಿಬ್ಬರು ನೀರು ಕುಡಿದಿದ್ದಾರೆ. ಕೀಟನಾಶಕ ಬೆರೆಸಿದ ನೀರು ಕುಡಿದ ಬೆನ್ನಲ್ಲೇ ಮೂವರು ಅಸ್ವಸ್ಥಗೊಂಡಿದ್ದಾರೆ. ಇತ್ತ ಆರೋಪಿ ವಿನಯ್ ಹಾಗೂ ಆತನ ಸ್ನೇಹಿತ ಅಲ್ಲಿಂದ ಪರಾರಿಯಾಗಿದ್ದಾರೆ. ಆರೋಪಿ ವಿನಯ್ ಪೊಲೀಸರ ಬಳಿ ನೀರಿನಲ್ಲಿ ಕೀಟನಾಶಕ ಬೆರೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಇದರಿಂದ ಇಬ್ಬರು ದಲಿತ ಬಾಲಕಿಯರ ಬಾಲಕಿಯರ ಪ್ರಾಣ ಪಕ್ಷಿ ಹಾರಿಹೋಗಿದ್ದರೆ, 18ರ ದಲಿತ ಬಾಲಕಿ ಇದೀಗ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ವಿನಯ್ ಹೇಳಿಕೆಯಲ್ಲಿ ಕೆಲ ಗೊಂದಲಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನೀರಿನಲ್ಲಿ ಕೀಟನಾಶ ಬೆರೆಸಿರುವುದು ದೃಢಪಟ್ಟಿದೆ. ಆದರೆ ಈ ನೀರನ್ನು ಬಲವಂತವಾಗಿ ಕುಡಿಸಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಯನ್ ಜೊತೆ 15 ವರ್ಷದ ಅಪ್ರಾಪ್ತನನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿದೆ.

TRENDING