Saturday, April 17, 2021
Home ಸುದ್ದಿ ಜಾಲ ಅಸ್ಸಾಂ: ಅತಿ ಎತ್ತರದ ಮಹಾಮೃತ್ಯುಂಜಯ ದೇಗುಲ ಪ್ರತಿಷ್ಠಾಪನೆಗೆ ಸಜ್ಜು

ಇದೀಗ ಬಂದ ಸುದ್ದಿ

ಅಸ್ಸಾಂ: ಅತಿ ಎತ್ತರದ ಮಹಾಮೃತ್ಯುಂಜಯ ದೇಗುಲ ಪ್ರತಿಷ್ಠಾಪನೆಗೆ ಸಜ್ಜು

ಬೆಂಗಳೂರು: ಅಸ್ಸಾಂನಲ್ಲಿ ಶಿವಲಿಂಗದ ಆಕಾರದಲ್ಲಿ ನಿರ್ಮಾಣವಾಗಿರುವ 136 ಅಡಿ ಎತ್ತರದ ಮಹಾಮೃತ್ಯುಂಜಯ ದೇವಸ್ಥಾನವು ಉದ್ಘಾಟನೆಗೆ ಸಜ್ಜಾಗಿದೆ. ನಾಗಾಂವ್ ಜಿಲ್ಲೆಯ ಪುರಾಣಿ ಗೋದಾಮ್ ಗ್ರಾಮದಲ್ಲಿರುವ ದೇಗುಲವು ದೇಶದ ಎರಡನೇ ಮಹಾ ಮೃತ್ಯುಂಜಯ ದೇವಸ್ಥಾನ ಎನಿಸಿದೆ. ಈಗಾಗಲೇ ಮಧ್ಯಪ್ರದೇಶದಲ್ಲಿ ಪ್ರಾಚೀನ ಮಹಾಮೃತ್ಯುಂಜಯ ದೇವಾಲಯ ಇದೆ.

ಫೆ. 22ರಿಂದ ಮಾರ್ಚ್ 3ರವರೆಗೆ ಪ್ರತಿಷ್ಠಾಪನಾ ಕೈಂಕರ್ಯಗಳು ನಡೆಯಲಿವೆ. ಫೆ. 27ರಂದು ಮೃತ್ಯುಂಜಯ ದೇವರ ಪ್ರತಿಷ್ಠಾಪನೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪಾಲ್ಗೊಳ್ಳಲಿದ್ದಾರೆ.

ಇದು ವಿಶ್ವದ ಅತಿ ಎತ್ತರದ ಶಿವ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕಾಸರಗೋಡಿನ ಗೋಕುಲಂ ಗೋಶಾಲೆಯ ಪೂಚಕ್ಕಾಡು ವಿಷ್ಣು ಪ್ರಸಾದ್ ಹೆಬ್ಬಾರ್ ಅವರು ಹೇಳಿದ್ದಾರೆ. ಹೆಬ್ಬಾರರ ನೇತೃತ್ವದಲ್ಲಿ ಪರಂಪರಾ ವಿದ್ಯಾಪೀಠದ 250 ವೈದಿಕ ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಪೈಕಿ ಕರ್ನಾಟಕದ 200 ವೈದಿಕರು ಇದ್ದಾರೆ. ಜೊತೆಗೆ ಉತ್ತರ ಭಾರತದ 250 ವೈದಿಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದು ಹಿರಣ್ಯಕಶಿಪು ತಪಸ್ಸು ಮಾಡಿರುವ ಸ್ಥಳ ಎಂಬ ಪ್ರತೀತಿ ಇದೆ. ಈ ಜಾಗದಲ್ಲಿ ಭೃಗು ಗಿರಿ ಮಹಾರಾಜ್ ಎಂಬ ಸಂತ ಚಿಕ್ಕ ಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ್ದರು. ಅವರ ಸಂಕಲ್ಪದಂತೆ ಅವರ ಶಿಷ್ಯರು 17 ವರ್ಷಗಳಲ್ಲಿ ಬೃಹತ್ ದೇವಾಲಯ ನಿರ್ಮಿಸಿದ್ದಾರೆ. ದೇಗುಲ ನಿರ್ಮಾಣ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ಕೆ ಅಸ್ಸಾಂ ಸರ್ಕಾರ ಸಹಕಾರ ನೀಡಿದೆ.

ದೇಗುಲ ಟ್ರಸ್ಟ್‌ನ ಅಧ್ಯಕ್ಷ, ಹಿರಿಯ ಮುಖಂಡ ಹಿಮ೦ತ ಬಿಸ್ವ ಶರ್ಮ ನೇತೃತ್ವದ ಸಮಿತಿಯು ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಿದೆ. ಶತಚಂಡಿ ಹವನ, ಹತ್ತು ಲಕ್ಷ ಮೃತ್ಯುಂಜಯ ಮಂತ್ರ ಜಪ, ಸಹಸ್ರ ಕಲಶಾಭಿಷೇಕ, ಮಹಾರುದ್ರ ಮತ್ತು ಚತುರ್ವೇದ ಪಾರಾಯಣ ಇತ್ಯಾದಿಗಳು ನೆರವೇರಲಿದೆ. ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಕೆ.ಎನ್. ನರಸಿಂಹ ಅಡಿಗ ಅವರು ಶತಚಂಡಿ ಹವನ ನೆರವೇರಿಸಲಿದ್ದಾರೆ. ತಿರುವನಂತಪುರದ ಅನಂತಶಯನ ದೇವಾಲಯದ ಪ್ರಧಾನ ಅರ್ಚಕರ ಪುತ್ರ ವಿನೀತ ಪಟ್ಟೇರಿ ಅವರು ಪ್ರತಿಷ್ಠಾಂಗ ಕರ್ಮಗಳನ್ನು ನೆರವೇರಿಸುತ್ತಾರೆ.

TRENDING