Saturday, April 17, 2021
Home ಸುದ್ದಿ ಜಾಲ ಯುನೈಟೆಡ್‌ ಆಸ್ಪತ್ರೆಯ 9ನೇ ವಾರ್ಷಿಕೋತ್ಸವ ಸಂಭ್ರಮ

ಇದೀಗ ಬಂದ ಸುದ್ದಿ

ಯುನೈಟೆಡ್‌ ಆಸ್ಪತ್ರೆಯ 9ನೇ ವಾರ್ಷಿಕೋತ್ಸವ ಸಂಭ್ರಮ

ಕಲಬುರ್ಗಿ: ಇಲ್ಲಿನ ಯುನೈಟೆಡ್‌ ಆಸ್ಪತ್ರೆಯ 9ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದರ ಅಂಗವಾಗಿ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕೂಡ ಮಾಡಲಾಯಿತು.

ಒಂದೇ ದಿನದಲ್ಲಿ ಸುಮಾರು 1,350ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಲಾಯಿತು. ರಕ್ತ ತಪಾಸಣೆ, ಇಸಿಜಿ, ಎಕ್ಸ್‌ರೇ, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌, ಬಾಡಿ ಮಾಸ್‌ ಇಂಡೆಕ್ಸ್‌ಗಳನ್ನು ಕೂಡ ಉಚಿತವಾಗಿ ಮಾಡಲಾಯಿತು. ಅಗತ್ಯವಿದ್ದ ಹಲವು ರೋಗಿಗಳಿಗೆ ಉಚಿತವಾಗಿಯೇ ಔಷಧಿಗಳನ್ನೂ ವಿತರಿಸಲಾಯಿತು.

ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್‌ ಸಿದ್ದಾರೆಡ್ಡಿ, ಡಾ.ವೀಣಾ ಸಿದ್ದಾರೆಡ್ಡಿ, ಡಾ.ಶರಣಪ್ರಕಾಶ ಪಾಟೀಲ ಅವರ ನೇತೃತ್ವದಲ್ಲಿ, ಡಾ.ಅಬ್ದುಲ್ ಬಶೀರ್, ಡಾ.ಅನಿಲ ಪಾಟೀಲ, ಡಾ.ವಿನಯ ಶರ್ಮಾ, ಡಾ.ವೀರೇಶ ಸಲಗರ್, ಡಾ.ದಯಾನಂದ ರೆಡ್ಡಿ, ಡಾ.ಕೈಲಾಸ ಬನಾಳೆ, ಡಾ.ಯು.ಕೆ. ಜೋಶಿ, ಡಾ.ಅತ್ತರ ಸುಲ್ತಾನ್‌, ಡಾ.ಪವನ ಪಾಟೀಲ, ಅನಿಲ ಮಲ್ಹಾರಿ, ಡಾ.ವಿವೇಕ ಪಾಟೀಲ, ಡಾ.ರಾಮಾಚಾರ್ಯ, ಡಾ.ಶಿವಾನಂದ ಪಾಟೀಲ, ಡಾ.ಕೇದಾರನಾಥ ರಟಕಲ್, ಡಾ.ದಿನೇಶ ವಳಸೆ ಅವರು ತಮ್ಮ ತಮ್ಮ ವಿಭಾಗದ ರೋಗಿಗಳಿಗೆ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಿದರು.

ಉದ್ಘಾಟನೆ: ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಅವರು, ‘ಡಾ.ವಿಕ್ರಮ್‌ ಸಿದ್ದಾರೆಡ್ಡಿ ಅವರ ನೇತೃತ್ವದಲ್ಲಿ ಯುನೈಟೆಡ್‌ ಆಸ್ಪತ್ರೆ ಜನೋಪಯೋಗಿ ಕೆಲಸ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಹೆಸರು ಮಾಡಿರುವ ಈ ಆಸ್ಪತ್ರೆಯು ಸಾಮಾಜಿಕ ಕಳಕಳಿಯನ್ನೂ ತೋರುತ್ತಿರುವುದು ಶ್ಲಾಘನೀಯ’ ಎಂದರು.

‘ವೈದ್ಯಕೀಯ ಕ್ಷೇತ್ರದ ಆಧುನಿಕ ತಂತ್ರಜ್ಞಾನಗಳನ್ನು ಮೊದಲು ಅಳವಡಿಸಿಕೊಳ್ಳಲು ಮುಂದೆ ಬರುವುದೇ ಡಾ.ವಿಕ್ರಮ್‌ ಸಿದ್ದಾರೆಡ್ಡಿ ಅವರ ವಿಶೇಷ ಗುಣ. ಗುಣಮಟ್ಟದ ಚಿಕಿತ್ಸಾ ವಿಧಾನ, ಹಣಕ್ಕಿಂತ ಮೊದಲು ಚಿಕಿತ್ಸೆಗೆ ಆದ್ಯತೆ ನೀಡುವುದು, ಟ್ರಾಮಾ ಮತ್ತು ಸರ್ಜಿಕ್ ವ್ಯವಸ್ಥೆ ಮಾದರಿಯಾಗಿದೆ’ ಎಂದೂ ಪ್ರಶಂಸಿಸಿದರು.

‘ಕೊರೊನಾ ವೈರಾಣು ಹಾವಳಿ ಸಂದರ್ಭದಲ್ಲಿಯೂ ಅದರ ನಿಯಂತ್ರಣಕ್ಕೆ ಯುನೈಟೆಡ್‌ ಆಸ್ಪತ್ರೆ ಹಲವು ಕೆಲಸ ಮಾಡಿದೆ. ಜನರನ್ನು ಸೋಂಕಿನಿಂದ ಪಾರು ಮಾಡುವಲ್ಲಿ ಕೊಡುಗೆ ನೀಡಿದೆ. ಈ ವೈರಾಣು ಕಾಣಿಸಿಕೊಂಡಿದ್ದರಿಂದಲೇ ಈಗೀಗ ಜನರಿಗೆ ತಮ್ಮ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ಬರುತ್ತಿದೆ’ ಎಂದರು.

ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್‌ ಸಿದ್ದಾರೆಡ್ಡಿ, ಡಾ.ವೀಣಾ ಸಿದ್ದಾರೆಡ್ಡಿ, ಡಾ.ಶರಣಪ್ರಕಾಶ ಪಾಟೀಲ ವೇದಿಕೆ ಮೇಲಿದ್ದರು.

TRENDING