Saturday, April 17, 2021
Home ಸುದ್ದಿ ಜಾಲ ಸರ್ಕಾರಕ್ಕೆ ಮೀಸಲಾತಿಯದ್ದೇ ತಲೆಬಿಸಿ: ಸಚಿವ ಡಾ.ಕೆ. ಸುಧಾಕರ್

ಇದೀಗ ಬಂದ ಸುದ್ದಿ

ಸರ್ಕಾರಕ್ಕೆ ಮೀಸಲಾತಿಯದ್ದೇ ತಲೆಬಿಸಿ: ಸಚಿವ ಡಾ.ಕೆ. ಸುಧಾಕರ್

 ಚಿಕ್ಕಬಳ್ಳಾಪುರ: ‘ಇತ್ತೀಚೆಗೆ ರಾಜ್ಯದಲ್ಲಿ ಎಲ್ಲ ಸಮುದಾಯದವರು ಗುರುಗಳು, ಸ್ವಾಮೀಜಿಗಳು ಏಕಾಏಕಿ ರಸ್ತೆಗಿಳಿದು ಹೋರಾಟ ಮಾಡುತ್ತಿರುವುದು ಇದೇ ಮೊದಲು. ಹಾಗಾಗಿ, ಮೀಸಲಾತಿ ವಿಚಾರ ಇದೀಗ ಸರ್ಕಾರಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಡಿವಾಳ ಮಾಚಿದೇವರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನಾನು ಈ ರೀತಿ ಎಂದಿಗೂ ನೋಡಿರಲಿಲ್ಲ. ಎಲ್ಲ ಸಮುದಾಯದವರ ಗುರುಗಳು, ಸ್ವಾಮೀಜಿಗಳು ರಸ್ತೆಗಿಳಿದು ಪಾದಯಾತ್ರೆ ಮಾಡುತ್ತಿರುವುದು ಸರ್ಕಾರಕ್ಕೆ ಸವಾಲಿನ ಪ್ರಶ್ನೆಯಾಗಿದೆ. ಆದರೆ, ರಾಜಕೀಯದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದರು.

‘ಯಾವ ನೆಲಗಟ್ಟಿನ ಮೇಲೆ ಮೀಸಲಾತಿಯನ್ನು ಕಲ್ಪಿಸಬೇಕು ಎಂಬುದರ ಕುರಿತು ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕ ಅವಕಾಶಗಳಿಂದ ವಂಚಿತರಾಗಿರುವವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಾನೂನು ಮತ್ತು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕಾಗುತ್ತದೆ’ ಎಂದರು.

ಸುಪ್ರೀಂಕೋರ್ಟ್‌ ಮಾರ್ಗದರ್ಶನದ ಅನ್ವಯ ಎಲ್ಲ ಮೀಸಲಾತಿಯನ್ನು ಸೇರಿಸಿ ಶೇ. 50 ರಷ್ಟು ದಾಟುವ ಆಗಿಲ್ಲ. ಆದರೆ, ಕೇವಲ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರೇರಿತವಾಗಿ ಮನಸೋ ಇಚ್ಛೆಯಿಂದ ಮೀಸಲಾತಿ ಜಾರಿಗೆ ತರಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಆದರೆ, ತಮಿಳುನಾಡಿನಲ್ಲಿ ಮಾತ್ರ ಶೇ 67ರಷ್ಟು ಮೀಸಲಾತಿ ಕೊಡಲಾಗಿದೆ’ ಎಂದು ವಿವರಿಸಿದರು.

‘ನಾನು ಮೀಸಲಾತಿ ಹೋರಾಟವನ್ನು ವಿರೋಧಿಸುವುದಿಲ್ಲ. ಜೊತೆಗೆ, ಮೀಸಲಾತಿ ಕುರಿತು ಸುಳ್ಳು ಭರವಸೆಯೂ ನೀಡುವುದಿಲ್ಲ. ವರದಿಯನ್ನು ತೆಗೆದುಕೊಂಡು ಯಾವ ಸಮುದಾಯಗಳಿಗೆ ನ್ಯಾಯಬದ್ಧ ಮೀಸಲಾತಿಯನ್ನು ಕಲ್ಪಸಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತದೆ’ ಎಂದು ಹೇಳಿದರು.

TRENDING