ಮಂಗಳೂರು, ಫೆ.19: ಧೈರ್ಯಕ್ಕೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿಯವರದ್ದು, ಇವರು ಒಬ್ಬ ಕೆಚ್ಚೆದೆಯ ಸ್ವಾತಂತ್ರ ಹೋರಾಟಗಾರ. ದೇಶಪ್ರೇಮ ಯುವಜನತೆಯಲ್ಲಿ ಮೂಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಛತ್ರಪತಿ ಶಿವಾಜಿ ಮತ್ತು ಸವಿತಾ ಮಹರ್ಷಿ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶಪ್ರೇಮ, ತ್ಯಾಗ, ಬಲಿದಾನಕ್ಕೆ ಛತ್ರಪತಿ ಶಿವಾಜಿಯವರು ಹೆಸರುವಾಸಿಯಾಗಿದ್ದು, ಇಂದಿಗೂ ಭಾರತ ಅವರನ್ನು ಸ್ಮರಿಸಿಕೊಳ್ಳುತ್ತಿದೆ. ಭಾರತದ ಚರಿತ್ರೆಯಲ್ಲಿಯೇ ನಿಲ್ಲುವಂತಹ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಸವಿತಾ ಮಹರ್ಷಿ ಕೂಡ ಸಮಾಜದಲ್ಲಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಸರಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ಬೆಳಕು ತೋರಿಸಿದೆ. ಸವಿತಾ ಸಮಾಜವು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ತಿಳಿಸಿದರು.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಎ.ವಿ. ಸುರೇಶ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ್ ಭಂಡಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಆರ್ಯ ಯಾನೆ ಮರಾಠ ಸಮಾಜ ಸೇವಾ ಸಂಘದ ಅಧ್ಯಕ್ಷ ಯತೀಂದ್ರ ಬಹುಮಾನ್ ಮತ್ತಿತರರು ಉಪಸ್ಥಿತರಿದ್ದರು.