Saturday, April 17, 2021
Home ಸುದ್ದಿ ಜಾಲ BPL ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

BPL ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ

ಚಿತ್ರದುರ್ಗ: ಅನರ್ಹರು ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕರುಗಳನ್ನು ಸಂಪರ್ಕಿಸಿ ಎಪಿಎಲ್ ಪಡಿತರ ಚೀಟಿಗೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ತಾವೇ ಸ್ವತಃ ಅನರ್ಹ ಚೀಟಿಗಳನ್ನು ಹಿಂತಿರುಗಿಸಿದವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ವಿವಿಧ ಇಲಾಖೆಗಳ ದತ್ತಾಂಶ ಸಹಯೋಗದೊಂದಿಗೆ ಮಾಹಿತಿಯನ್ನು ಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಕಂಡು ಬಂದಲ್ಲಿ ತಾವೂ ತಾವು ಪಡಿತರ ಚೀಟಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ ದಿನಾಂಕದವರೆಗೆ ತಾವು ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆ.ಜಿ.ಗೆ ಮುಕ್ತ ಮಾರುಕಟ್ಟೆಯ ಬೇಡಿಕೆಯ ಅನುಸಾರ ದಂಡದ ಹಣವನ್ನು ವಸೂಲಿ ಮಾಡಿ, ಸರ್ಕಾರದ ಲೆಕ್ಕಶೀರ್ಷಿಕೆ ಜಮಾ ಮಾಡಲಾಗುವುದು. ಜೊತೆಗೆ, “ದಿ ಕರ್ನಾಟಕ ಪ್ರಿವೆನ್ಷನ್ ಆಪ್ ಅನ್‍ಅಥರೈಜ್ಡ್ ಪೊಸಿಷನ್ ಆಫ್ ರೇಷನ್ ಕಾರ್ಡ್ ಆರ್ಡರ್-1997’ರ ರೀತ್ಯ ಕ್ರಮವಹಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಅನರ್ಹರು ತಾವು ಹೊಂದಿರುವ ಅಂತ್ಯೋದಯ ಅಥವಾ ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಬೇಗ ವಾಪಸ್ಸು ನೀಡಿ ಕಾನೂನು ಕ್ರಮದಿಂದ ವಿಮುಕ್ತಿ ಹೊಂದಲು ತಿಳಿಯಪಡಿಸಿದೆ.

ಸರ್ಕಾರಿ ನೌಕರರು, ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಸಗಿ ನೌಕರರು, ಸರ್ಕಾರಿ ಅನುದಾನಿತ ನೌಕರರು, ನಿಗಮಗಳು, ಮಂಡಳಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು. ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಹಾಗೂ ಒಂದೇ ಕುಟುಂಬದಲ್ಲಿದ್ದರೂ, ಒಟ್ಟಿಗೆ ವಾಸಿಸುತ್ತಿದ್ದರೂ ಪ್ರತ್ಯೇಕ ಪಡಿತರ ಚೀಟಿ ಹೊಂದಿರುವುದು. ಸಾರ್ವಜನಿಕರು ಈ ಮಾನದಂಡಗಳ ಅನ್ಚಯ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಪಡೆಯಲು ಆರ್ಹರಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

TRENDING