ನವದೆಹಲಿ: ಪತಂಜಲಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಕೋವಿಡ್ ಔಷಧಿ ‘ಕೊರೊನಿಲ್’ಗೆ ಆಯುಷ್ ಸಚಿವಾಲಯದಿಂದ ಪ್ರಮಾಣ ಪತ್ರ ದೊರೆತಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿರುವ ಅವರು, ಕೊರೊನಿಲ್ ಕುರಿತ ಸಂಶೋಧನಾ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಆಯುಷ್ ಸಚಿವಾಲಯವು ಕೊರೊನಿಲ್ಗೆ ಪ್ರಮಾಣ ಪತ್ರ ನೀಡಿದೆ ಎಂದು ರಾಮದೇವ್ ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಕೊರೊನಿಲ್ ಮಾತ್ರೆಯು ಕೊರೊನಾ ಸೋಂಕಿನ ಚಿಕಿತ್ಸೆಗೆ ‘ಮೊದಲ ಸಾಕ್ಷ್ಯ ಆಧಾರಿತ ಆಯುರ್ವೇದ ಔಷಧ’ವಾಗಿದೆ ಎಂದು ರಾಮದೇವ್ ಹೇಳಿದ್ದಾರೆ.
ಕೊರೊನಿಲ್ಗೆ ಸಂಬಂಧಪಟ್ಟಂತೆ ಬಿಡುಗೊಳಿಸಿರುವ ಸಂಶೋಧನಾ ಪತ್ರಗಳು ಈ ಮೊದಲು ಔಷಧದ ವೈಜ್ಞಾನಿಕ ಪ್ರಸ್ತುತತೆಯನ್ನು ಪ್ರಶ್ನಿಸಿದವರಿಗೆ ಉತ್ತರವಾಗಿದೆ ಎಂದು ರಾಮದೇವ್ ತಿಳಿಸಿದ್ದಾರೆ.
‘ವೈಜ್ಞಾನಿಕ ಪುರಾವೆಗಳನ್ನು ಒದಗಿಸುವ ಮೂಲಕ ಭಾರತದ ಪ್ರಾಚೀನ ವೈದ್ಯಕೀಯ ವಿಜ್ಞಾನವನ್ನು ಜಾಗತಿಕವಾಗಿ ಬೆಳೆಸುವುದು. ಆರೋಗ್ಯ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತವನ್ನು ನಿರ್ಮಿಸುವುದು ಪತಂಜಲಿ ಸಂಸ್ಥೆಯ ಉದ್ದೇಶವಾಗಿದೆ’ ಎಂದು ರಾಮದೇವ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು
ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಬಲ್ಲ ಆಯುರ್ವೇದ ಔಷಧಿಯನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಪತಂಜಲಿ ಸಂಸ್ಥೆ ಕಳೆದ ವರ್ಷ ಜೂನ್ನಲ್ಲಿ ಹೇಳಿಕೊಂಡಿತ್ತು.
‘ಕೋವಿಡ್-19 ಗುಣಪಡಿಸಲಿದೆ ಎಂದು ಹೇಳಿಕೊಂಡಿರುವ ಔಷಧ ವಿವರಗಳನ್ನು ಆದಷ್ಟು ಬೇಗ ಕೊಡಬೇಕು ಹಾಗೂ ಪರಿಶೀಲನೆಯವರೆಗೂ ಈ ಉತ್ಪನ್ನ ಕುರಿತು ಜಾಹೀರಾತು ನೀಡಬಾರದು’ ಎಂದು ಆಯುಷ್ ಸಚಿವಾಲಯ ತಾಕೀತು ಮಾಡಿತ್ತು.
‘ಕಂಪನಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ, ಔಷಧಕ್ಕೆ ಅಂತಿಮ ಒಪ್ಪಿಗೆ ನೀಡಬೇಕೇ ಎನ್ನುವುದರ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಬಾಬಾ ರಾಮ್ದೇವ್ ಹೊಸ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಒಳ್ಳೆಯದೇ, ಆದರೆ ಅದೇನೇ ಸಂಶೋಧನೆ ಆಗಿರಲಿ, ಅದು ಆಯುಷ್ ಇಲಾಖೆಯ ಅನುಮತಿ ಪಡೆಯಲೇಬೇಕು’ ಎಂದು ಸಚಿವರು ತಿಳಿಸಿದ್ದರು.
ಜ್ವರ ಮತ್ತು ಕೆಮ್ಮಿನ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ತಯಾರಿಕೆಗೆ ಅನುಮತಿ ಪಡೆದು, ಕೋವಿಡ್ ಗುಣಪಡಿಸುವ ಹೆಸರಿನಲ್ಲಿ ಔಷಧ ಸಿದ್ಧಪಡಿಸಿರುವುದಕ್ಕೆ ಉತ್ತರಾಖಂಡ ಸರ್ಕಾರ ಪತಂಜಲಿ ಕಂಪನಿಗೆ ನೋಟಿಸ್ ನೀಡಿತ್ತು.