Saturday, April 17, 2021
Home ಜಿಲ್ಲೆ ಬೆಂಗಳೂರು ಬೆಂಗಳೂರು : ನೂತನ ಪಾರ್ಕಿಂಗ್ ನೀತಿಗೆ ಆಡಳಿತ ಪಕ್ಷದವರಿಂದಲೇ ವಿರೋಧ

ಇದೀಗ ಬಂದ ಸುದ್ದಿ

ಬೆಂಗಳೂರು : ನೂತನ ಪಾರ್ಕಿಂಗ್ ನೀತಿಗೆ ಆಡಳಿತ ಪಕ್ಷದವರಿಂದಲೇ ವಿರೋಧ

ಬೆಂಗಳೂರು,ಫೆ.18-ನಗರದಲ್ಲಿ ಸುಗಮ ವಾಹನ ಸಂಚಾರ ಹಾಗೂ ಅನುಕೂಲ ಕಲ್ಪಿಸಿಕೊಡುವ ಸದುದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿ ಮಾಡಲು ಉದ್ದೇಶಿಸಲಾಗಿರುವ ನೂತನ ಪಾರ್ಕಿಂಗ್ ನೀತಿಗೆ ಆಡಳಿತ ಪಕ್ಷದವರಿಂದಲೇ ವಿರೋಧ ವ್ಯಕ್ತವಾಗಿದೆ. ಏಪ್ರಿಲ್ ತಿಂಗಳ ನಂತರ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಯಿರುವುದರಿಂದ ಸದ್ಯಕ್ಕೆ ಪಾರ್ಕಿಂಗ್ ನೀತಿಯನ್ನು ಜಾರಿ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಬಿಜೆಪಿಯವರು ಒತ್ತಡ ಹಾಕಿದ್ದಾರೆ.

ಡಿಸಿಎಂ ಡಾ.ಸಿ.ಎನ್.ಅಶ್ವಥ್‍ನಾರಾಯಣ್, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಎಸ್.ಸುರೇಶ್‍ಕುಮಾರ್, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಶಾಸಕರಾದ ಎಂ.ಸತೀಶ್ ರೆಡ್ಡಿ, ಮುನಿರತ್ನ, ಉದಯ ಗರುಡಾಚಾರ್ ಸೇರಿದಂತೆ ಮತ್ತಿತರರು ಪಾರ್ಕಿಂಗ್ ನೀತಿ ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.
ಪಾರ್ಕಿಂಗ್ ನೀತಿಯನ್ನು ಅನುಷ್ಠಾನ ಮಾಡಿದರೆ ಬಿಜೆಪಿಯ ಪ್ರಮುಖ ಮತದಾರರಾದ ಮಧ್ಯಮವರ್ಗ, ವ್ಯಾಪಾರಸ್ಥರು, ಮುನಿಸಿಕೊಳ್ಳಬಹುದು. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವನ ಸಾಗಿಸುವ ಸಾರ್ವಜನಿಕರ ಮನೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಬಹುತೇಕರು ಮನೆಯ ಮುಂದುಗಡೆಯೇ ಕಾರುಗಳು, ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ. ನಾವು ಪಾರ್ಕಿಂಗ್ ನೀತಿ ಅಳವಡಿಸಿದರೆ ಮಧ್ಯಮ ವರ್ಗದ ಮತದಾರರನ್ನು ಕಳೆದುಕೊಳ್ಳಬೇಕಾಗುತ್ತದೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಿದರೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ, ಈಗಾಗಲೇ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದರಿಂದ ಜನತೆಯ ಕೆಂಗೆಣ್ಣಿಗೆ ಗುರಿಯಾಗಿದ್ದೇವೆ. ಇಂಥ ಸಂದರ್ಭದಲ್ಲೇ ಪಾರ್ಕಿಂಗ್ ನೀತಿ ಜಾರಿ ಮಾಡಿದರೆ ವಿರೋಧ ಪಕ್ಷದವರು ಎತ್ತಿಕಟ್ಟುವ ಕೆಲಸ ಮಾಡುತ್ತಾರೆ. ಬಿಜೆಪಿ ಜನವಿರೋಧಿ ಎಂಬ ಹಣೆಪಟ್ಟಿ ಕಟ್ಟುತ್ತಾರೆ.

ಈಗಾಗಲೇ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ದರ ಲೀಟರ್‍ಗೆ 100 ರೂ. ಆಗಿದೆ. ಜನಸಾಮಾನ್ಯರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪಾರ್ಕಿಂಗ್ ನೀತಿ ಜಾರಿ ಮಾಡಿದರೆ ಚುನಾವಣೆಯಲ್ಲಿ ಹಿನ್ನಡೆಯಾಗುವುದು ಖಚಿತ ಎಂಬ ಆತಂಕವನ್ನು ಬೆಂಗಳೂರು ಪ್ರತಿನಿಧಿಸುವ ಶಾಸಕರು ಮತ್ತು ಸಚಿವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶೀಘ್ರದಲ್ಲೇ ಬೆಂಗಳೂರು ಪ್ರತಿನಿಧಿಸುವ ಸಂಸದರು, ಸಚಿವರು, ಶಾಸಕರು ಹಾಗೂ ಮತ್ತಿತರ ಮುಖಂಡರ ಸಭೆ ಕರೆದು ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

TRENDING