Tuesday, April 13, 2021
Home ಸುದ್ದಿ ಜಾಲ ಆಸ್ಟ್ರೇಲಿಯದಲ್ಲಿ ಸುದ್ದಿ ಲಿಂಕ್ ಹಂಚಿಕೊಳ್ಳುವುದನ್ನು ನಿರ್ಬಂಧಿಸಿದ ಫೇಸ್​ಬುಕ್

ಇದೀಗ ಬಂದ ಸುದ್ದಿ

ಆಸ್ಟ್ರೇಲಿಯದಲ್ಲಿ ಸುದ್ದಿ ಲಿಂಕ್ ಹಂಚಿಕೊಳ್ಳುವುದನ್ನು ನಿರ್ಬಂಧಿಸಿದ ಫೇಸ್​ಬುಕ್

ಆಸ್ಟ್ರೇಲಿಯದ ಬಳಕೆದಾರರಿಗೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸುದ್ದಿಯ ಕಂಟೆಂಟ್‌ಗಳನ್ನ ಹಂಚಿಕೊಳ್ಳುವುದು ಮತ್ತು ನೋಡುವುದನ್ನು ನಿರ್ಬಂಧಿಸಿದೆ. ಇದರಿಂದ ಪ್ರಮುಖ ಮಾಹಿತಿಗೆ ಸಾರ್ವಜನಿಕ ಪ್ರವೇಶದ ಬಗ್ಗೆ ಹೆಚ್ಚಿನ ಎಚ್ಚರಿಕೆ ಉಂಟುಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಆಸ್ಟ್ರೇಲಿಯ ಸರ್ಕಾರದ ಪ್ರಸ್ತಾವಿತ ಕಾನೂನಿಗೆ ಫೇಸ್‌ಬುಕ್‌ ಈ ಪ್ರತಿಕ್ರಿಯೆ ನೀಡಿದೆ. ಆ ಪ್ರಸ್ತಾವಿತ ಕಾನೂನಿನ ಪ್ರಕಾರ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿನ ಸುದ್ದಿ ವಿಷಯಗಳಿಗೆ ಹಣ ಪಾವತಿಸಬೇಕು ಎಂದು ಆಸ್ಟ್ರೇಲಿಯ ಸರ್ಕಾರ ಹೇಳಿದೆ. ಎಲ್ಲಾ ಸ್ಥಳೀಯ ಮತ್ತು ಜಾಗತಿಕ ಸುದ್ದಿ ತಾಣಗಳ ಫೇಸ್‌ಬುಕ್ ಪುಟಗಳು ಲಭ್ಯವಿಲ್ಲ ಎಂಬುವುದನ್ನು ಆಸ್ಟ್ರೇಲಿಯನ್ನರು ಗುರುವಾರ ಬೆಳಗ್ಗೆಯೇ ಕಂಡುಕೊಂಡಿದ್ದಾರೆ. ಹಲವಾರು ಸರ್ಕಾರಿ ಆರೋಗ್ಯ ಮತ್ತು ಎಮರ್ಜೆನ್ಸಿ ಪುಟಗಳನ್ನು ಸಹ ನಿರ್ಬಂಧಿಸಲಾಗಿದೆ. ಫೇಸ್‌ಬುಕ್ ನಂತರ ಏನೋ ತಪ್ಪಾಗಿದೆ ಎಂದು ಪ್ರತಿಪಾದಿಸಿದೆ. ದೇಶದ ಹೊರಗಿನವರಿಗೆ ಸಹ ಸಾಮಾಜಿಕ ಪ್ಲಾಟ್‌ಫಾರ್ಮ್‌ನಲ್ಲಿ
ಯಾವುದೇ ಆಸ್ಟ್ರೇಲಿಯದ ಸುದ್ದಿ ಪ್ರಕಟಣೆಗಳನ್ನು ಓದಲು ಅಥವಾ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಆಸ್ಟ್ರೇಲಿಯ ಸರ್ಕಾರವು ಈ ಕ್ರಮವನ್ನು ತೀವ್ರವಾಗಿ ಟೀಕಿಸಿದೆ, ಇದು “ಈ ಡಿಜಿಟಲ್ ಸಾಮಾಜಿಕ ದೈತ್ಯರ ಅಪಾರ ಮಾರುಕಟ್ಟೆ ಶಕ್ತಿಯನ್ನು” ಪ್ರದರ್ಶಿಸುತ್ತದೆ ಎಂದು ಹೇಳಿದೆ.

ಗೂಗಲ್ ಮತ್ತು ಫೇಸ್‌ಬುಕ್ ಆಸ್ಟ್ರೇಲಿಯದ ಈ ಕಾನೂನಿನ ವಿರುದ್ಧ ಹೋರಾಡುತ್ತಿದೆ. ಏಕೆಂದರೆ ಅದು ಇಂಟರ್​​​​ನೆಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಅವರ ಪ್ಲ್ಯಾಟ್‌ಫಾರ್ಮ್‌ಗಳಿಗೆ ಅನ್ಯಾಯವಾಗಿ “ದಂಡ ವಿಧಿಸುತ್ತದೆ” ಎಂದು ಅವರು ಹೇಳುತ್ತಾರೆ. ಆದರೂ, ಫೇಸ್‌ಬುಕ್‌ಗೆ ವ್ಯತಿರಿಕ್ತವಾಗಿ, ಗೂಗಲ್ ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದ ಮೂರು ಪ್ರಮುಖ ಮಾಧ್ಯಮಗಳೊಂದಿಗೆ ಪಾವತಿ ಒಪ್ಪಂದಗಳಿಗೆ ಸಹಿ ಹಾಕಿದೆ. ರುಪೋರ್ಟ್‌ ಮುರ್ಡೋಕ್‌ ಅವರ ನ್ಯೂಸ್ ಕಾರ್ಪ್‌ಗೆ ಪಾವತಿಸಲು ಗೂಗಲ್ ಒಪ್ಪಿದ ಕೆಲವೇ ಗಂಟೆಗಳ ನಂತರ ಫೇಸ್‌ಬುಕ್‌ ಈ ಕ್ರಮ ಕೈಗೊಂಡಿದೆ.

ಫೇಸ್‌ಬುಕ್ ಇದನ್ನು ಏಕೆ ಮಾಡುತ್ತಿದೆ?ಟೆಕ್ ದೈತ್ಯರು ಮತ್ತು ಹೆಣಗಾಡುತ್ತಿರುವ ಪಬ್ಲಿಷರ್‌ಗಳ ನಡುವಿನ ಲಾಭದ ವಿಚಾರದ ಬಗ್ಗೆ ಆಸ್ಟ್ರೇಲಿಯ ಸರ್ಕಾರ ಮಧ್ಯಸ್ಥಿಕೆ ವಹಿಸುವ ಸಲುವಾಗಿ ಈ ಕಾನೂನುಗಳನ್ನು ರಚಿಸಿದೆ. ಇತ್ತೀಚೆಗೆ ಆಸ್ಟ್ರೇಲಿಯದ ಮಾಧ್ಯಮಗಳಲ್ಲಿ ಡಿಜಿಟಲ್ ಜಾಹೀರಾತಿಗಾಗಿ ಖರ್ಚು ಮಾಡಿದ ಪ್ರತಿ 100 ಡಾಲರ್‌ಗೆ 81 ಡಾಲರ್‌ ಗೂಗಲ್ ಮತ್ತು ಫೇಸ್‌ಬುಕ್‌ಗೆ ಸಿಗುತ್ತಿದೆ.

ಆದರೆ, ಈ ಕಾನೂನು ಒಪ್ಪದ ಫೇಸ್‌ಬುಕ್‌, ಪ್ರಕಾಶಕರು ಕಳೆದ ವರ್ಷ ರೆಫರಲ್‌ಗಳ ಮೂಲಕ ಸುಮಾರು 407 ಮಿಲಿಯನ್‌ ಡಾಲರ್‌ ಗಳಿಸಲು ಸಹಾಯ ಮಾಡಿದ್ದಾರೆ ಎಂದು ಫೇಸ್‌ಬುಕ್ ಹೇಳಿದೆ. ಆದರೆ ಸುದ್ದಿಗಳಿಂದ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಲಾಭ ಕಡಿಮೆ ಎಂದಿದ್ದಾರೆ. ನಿಷೇಧದ ಅಡಿಯಲ್ಲಿ, ಆಸ್ಟ್ರೇಲಿಯಾದ ಪ್ರಕಾಶಕರು ತಮ್ಮ ಫೇಸ್‌ಬುಕ್ ಪುಟಗಳಲ್ಲಿ ಯಾವುದೇ ಲಿಂಕ್‌ಗಳನ್ನು ಹಂಚಿಕೊಳ್ಳಲು ಅಥವಾ ಪೋಸ್ಟ್ ಮಾಡಲು ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಪ್ರಸಾರ, ಎಬಿಸಿ ಮತ್ತು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಮತ್ತು ದಿ ಆಸ್ಟ್ರೇಲಿಯಾದಂತಹ ಪತ್ರಿಕೆಗಳು ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿವೆ.

ಸರ್ಕಾರಿ ತಾಣಗಳ ಕತೆ ಏನು..?

ಫೇಸ್‌ಬುಕ್‌ನ ಈ ಬದಲಾವಣೆಯಿಂದ ಆಸ್ಟ್ರೇಲಿಯನ್ನರಿಗೆ ಪೊಲೀಸ್ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆಗಳು ಮತ್ತು ಹವಾಮಾನ ಬ್ಯೂರೋ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಸಂಸ್ಥೆಗಳಿಗೆ ಪ್ರವೇಶವನ್ನು ನಿರಾಕರಿಸಿದೆ. ದತ್ತಿ, ರಾಜಕಾರಣಿಗಳು, ಕ್ರೀಡಾ ಗ್ರೂಪ್‌ಗಳು ಮತ್ತು ಇತರ ಸುದ್ದಿಯೇತರ ಸಂಸ್ಥೆಗಳ ಇತರ ಪುಟಗಳ ಮೇಲೂ ಇದು ಪರಿಣಾಮ ಬೀರಿತು.

ಫೇಸ್‌ಬುಕ್ ನಂತರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಪೇಜ್‌ಗಳು “ಅಜಾಗರೂಕತೆಯಿಂದ ಪ್ರಭಾವಿತವಾಗಿವೆ” ಮತ್ತು ಅದು ಗಡುವನ್ನು ನೀಡದಿದ್ದರೂ ಅದನ್ನು ಪುನಃ ಸ್ಥಾಪಿಸಲಾಗುವುದು ಎಂದು ಹೇಳಿದರು. “ಸುದ್ದಿ ವಿಷಯ” ಎಂಬ ಪದಕ್ಕೆ “ವಿಶಾಲವಾದ ವ್ಯಾಖ್ಯಾನವನ್ನು” ತೆಗೆದುಕೊಂಡಿದೆ ಎಂದು ಫೇಸ್‌ಬುಕ್‌ ವಕ್ತಾರರು ಹೇಳಿದ್ದಾರೆ.

ಆಸ್ಟ್ರೇಲಿಯನ್ನರು ಹೇಗೆ ಪ್ರತಿಕ್ರಿಯಿಸಿದ್ದಾರೆ?

ಈ ನಿಷೇಧವು ತಕ್ಷಣದ ಹಿನ್ನಡೆಗೆ ಕಾರಣವಾಯಿತು, ಅನೇಕ ಆಸ್ಟ್ರೇಲಿಯನ್ನರು ವಿಶ್ವಾಸಾರ್ಹ ಮತ್ತು ಅಧಿಕೃತ ಮೂಲಗಳಿಗೆ ಪ್ರವೇಶವನ್ನು ಕಳೆದುಕೊಂಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತಿದೆ?

ಆಸ್ಟ್ರೇಲಿಯದ ಸಂಪ್ರದಾಯವಾದಿ ಸರ್ಕಾರವು ಪ್ರಸ್ತಾವಿತ ಕಾನೂನಿನ ಪರವಾಗಿಯೇ ನಿಂತಿದ್ದು, – ಬುಧವಾರ ಇದನ್ನು ಸಂಸತ್ತಿನ ಕೆಳಮನೆಯಲ್ಲಿ ಅಂಗೀಕರಿಸಲಾಗಿದೆ. ಇದಕ್ಕೆ ಆಡಳಿತ ಪಕ್ಷದ ಜತೆಗೆ ಹಲವು ಪಕ್ಷಗಳ ಬೆಂಬಲವೂ ಇದ್ದು, ಗುರುವಾರ ಮತ್ತೆ ಸಂಸತ್ತಿನಲ್ಲಿ ಚರ್ಚಿಸಲಾಗುವುದು ಎಂದೂ ಸರ್ಕಾರ ಹೇಳಿದೆ. ಇದನ್ನು ಕಾನೂನಾಗಿ ಜಾರಿಗೆ ತರುತ್ತೇವೆ ಎಂದೂ ಹೇಳಿದೆ.

TRENDING