Saturday, April 17, 2021
Home ಕ್ರಿಕೆಟ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಕ್ರಿಸ್ ಮೊರಿಸ್

ಇದೀಗ ಬಂದ ಸುದ್ದಿ

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಕ್ರಿಸ್ ಮೊರಿಸ್

 ಚೆನ್ನೈ: ದಕ್ಷಿಣ ಆಫ್ರಿಕಾದ ತಂಡ ಆಟಗಾರ, ಕಳೆದ ಸೀಸನ್ ನಲ್ಲಿ ಆರ್ ಸಿಬಿ ಪರ ಆಡಿದ್ದ ಆಲ್ ರೌಂಡರ್ ಕ್ರಿಸ್ ಮೊರಿಸ್ ಇಂದು ಹೊಸ ದಾಖಲೆ ಬರೆದಿದರು. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ದಾಖಲೆಗೆ ಮೊರಿಸ್ ಪಾತ್ರರಾದರು.

ಇಂದಿನ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಮೊರಿಸ್ ಖರೀದಿಗೆ ತಂಡಗಳು ಮುಗಿಬಿದ್ದವು. ಮುಂಬೈ ಇಂಡಿಯನ್ಸ್, ಆರ್ ಸಿಬಿ, ಚೆನ್ನೈ, ಪಂಜಾಬ್ ತಂಡಗಳು ಆರಂಭದಲ್ಲಿ ಭಾರಿ ಪೈಪೋಟಿ ನಡೆಸಿದರು. ಆದರೆ ಕೊನೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮೊರಿಸ್ ರನ್ನು ದಾಖಲೆಯ 16.25 ಕೋಟಿ ರೂ. ಬೆಲೆ ನೀಡಿ ಖರೀದಿಸುವಲ್ಲಿ ಸಫಲವಾಯಿತು.

ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಅತೀ ಹೆಚ್ಚು ಮೊತ್ತ. ಈ ಹಿಂದೆ 2015ರಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ 16 ಕೋಟಿ ರೂ. ನೀಡಿ ಖರೀದಿಸಿತ್ತು. 2020ರಲ್ಲಿ ಪ್ಯಾಟ್ ಕಮಿನ್ಸ್ ಅವರಿಗೆ ಕೆಕೆಆರ್ ತಂಡ 15.5 ಕೋಟಿ ರೂ ನೀಡಿತ್ತು.

ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಆರ್ ಸಿಬಿ ತಂಡ 14.25 ಕೋಟಿ ರೂ. ಕೊಟ್ಟು ಖರೀದಿಸಿತು. ಶಿವಂ ದುಬೆ ಅವರಿಗೆ ರಾಜಸ್ಥಾನ ತಂಡ 4.4 ಕೋಟಿ ರೂ. ನೀಡಿತು. ಡೇವಿಡ್ ಮಲಾನ್ ಅವರನ್ನು ಪಂಜಾಬ್ ತಂಡ 1.5 ಕೋಟಿ ರೂ. ನೀಡಿ ಖರೀದಿಸಿತು.

ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಕೋಟಿ ರೂ. ಗೆ ಖರೀದಿಸಿತು. ಶಕೀಬ್ ಅಲ್ ಹಸನ್ ಅವರು 3.2 ಕೋಟಿ. ರೂ ಗೆ ಕೆಕೆಆರ್ ತಂಡಕ್ಕೆ ಸೇರ್ಪಡೆಯಾದರು. ಕಳೆದ ಬಾರಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ಸ್ಟೀವ್ ಸ್ಮಿತ್ ಅವರನ್ನು 2.20 ಕೋಟಿ ರೂ. ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.

TRENDING