ಆನ್ ಲೈನ್ ನಲ್ಲಿ ಅಶ್ಲೀಲ ವಿಷಯಗಳನ್ನು ವೀಕ್ಷಿಸುವ ಬಳಕೆದಾರರ ಮೇಲೆ ಉತ್ತರ ಪ್ರದೇಶ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಅಂತಹ ವಿಷಯವನ್ನು ವೀಕ್ಷಿಸಿದವರಿಗೆ ಎಚ್ಚರಿಕೆ ನೀಡಲಾಗುವುದು ಅಂತ ಹೇಳಿದ್ದಾರೆ. ಯುಪಿ ಪೊಲೀಸ್ ನ 1090 ಸೇವೆಯ ಅಡಿಯಲ್ಲಿ ಈ ಉಪಕ್ರಮವನ್ನು ಆರಂಭಿಸಲಾಗಿದೆ. ಇದರ ಅಡಿಯಲ್ಲಿ, ಪೊಲೀಸ್ ತಂಡವು ಅಂತರ್ಜಾಲದಲ್ಲಿ ಅಶ್ಲೀಲ ತೆಯನ್ನು ವೀಕ್ಷಿಸುವವರ ಮೇಲೆ ನಿಗಾ ಇಡಲಿದೆ ಮತ್ತು ಯಾರು ಏನು ಮತ್ತು ಎಷ್ಟು ನೋಡುತ್ತಾರೆ ಎಂಬ ಮಾಹಿತಿಯನ್ನೂ ಸಹ ಸಂಗ್ರಹಿಸುತ್ತದೆಯಂತೆ.
ಪೊಲೀಸ್ ತಂಡ ಸ್ಥಾಪಿಸಿರುವ ಕಾರ್ಯವಿಧಾನದ ಪ್ರಕಾರ, ಅಶ್ಲೀಲ ವೆಬ್ ಸೈಟ್ ಗೆ ಹೋಗುವ ಯಾರೇ ಆಗಲಿ, ಯುಪಿ ಪೊಲೀಸ್ ನ 1090 ಸೇವೆಯ ಮೂಲಕ ವೆಬ್ ಸೈಟ್ ನಲ್ಲಿ ಪಾಪ್-ಅಪ್ ಅಲರ್ಟ್ ಅನ್ನು ತೋರಿಸಲಾಗುತ್ತದೆ. ಈ ಸಂದೇಶವು ಬಳಕೆದಾರರ ಡೇಟಾವನ್ನು ಪೊಲೀಸರು ರೆಕಾರ್ಡ್ ಮಾಡುತ್ತಿರುವುದಾಗಿ ಮತ್ತು ಜಾಗೃತರಾಗಿರುವಂತೆ ಎಚ್ಚರಿಸಲಿದೆ. ಇದರ ಜೊತೆಗೆ 1090 ಸಾಮಾಜಿಕ ಜಾಲತಾಣಗಳಾದ ಇನ್ ಸ್ಟಾಗ್ರಾಂ, ಫೇಸ್ ಬುಕ್ ಮೂಲಕ ಜನರಿಗೆ ಈ ಸೇವೆಯ ಬಗ್ಗೆ ಅರಿವು ಮೂಡಿಸಲು ಡಿಜಿಟಲ್ ಮೂಲಕ ಅಭಿಯಾನ ನಡೆಸಲಾಗುವುದು. ‘ಇಂತಹ ವಿಷಯಗಳಿಂದ ಹೆಚ್ಚು ಅಪಾಯದಲ್ಲಿರುವ ಹದಿಹರೆಯದವರ ಮೇಲೆ ನಿಗಾ ವಹಿಸುವುದು ಅವರ ಮನಸ್ಸು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೀರ ರಾವತ್, ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಯುಪಿಯ ಆರು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ಮೊದಲ ಬಾರಿಗೆ ಚಾಲನೆ ಗೊಳಿಸಲಾಗಿದೆ ಮತ್ತು ಉತ್ತಮ ಪ್ರತಿಕ್ರಿಯೆ ದೊರೆತಿದೆ . ‘ಈಗ ಇದು ಇಡೀ ರಾಜ್ಯದಲ್ಲಿ ಅನ್ವಯವಾಗಲಿದೆ. ಯುಪಿಯಲ್ಲಿ 11.6 ಕೋಟಿ ಮಂದಿ ಇಂಟರ್ ನೆಟ್ ಬಳಕೆದಾರರಿದ್ದಾರೆ. ಅಶ್ಲೀಲ ವಿಷಯಗಳನ್ನು ಪದೇ ಪದೇ ವೀಕ್ಷಿಸುವ ಎಲ್ಲ ಕಿರಿಯರಿಗೆ ಅರಿವು ಮೂಡಿಸುವ ಉದ್ದೇಶ ವಾಗಿದ್ದು , ಇದು ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಹಿಂದೆ ಒಂದು ಸಂಭಾವ್ಯ ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.