Saturday, April 17, 2021
Home ಸುದ್ದಿ ಜಾಲ ಕಾಂಗ್ರೆಸ್‌ ಹಿರಿಯ ನಾಯಕ ಕ್ಯಾಪ್ಟನ್ ಸತೀಶ್ ಶರ್ಮಾ ನಿಧನ

ಇದೀಗ ಬಂದ ಸುದ್ದಿ

ಕಾಂಗ್ರೆಸ್‌ ಹಿರಿಯ ನಾಯಕ ಕ್ಯಾಪ್ಟನ್ ಸತೀಶ್ ಶರ್ಮಾ ನಿಧನ

 ಪಣಜಿ: ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ, ಗಾಂಧಿ ಕುಟುಂಬಕ್ಕೆ ಬಹಳ ನಿಷ್ಠರಾಗಿದ್ದ ಕ್ಯಾಪ್ಟನ್ ಸತೀಶ್ ಶರ್ಮಾ ನಿಧನರಾಗಿದ್ದಾರೆ. ಇವರಿಗೆ 76 ವರ್ಷ ವಯಸ್ಸಾಗಿತ್ತು.

ಕೆಲವು ಸಮಯದಿಂದ ಕ್ಯಾನ್ಸರ್ ಹಾಗೂ ಇತರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶರ್ಮಾ ಅವರು ನಿನ್ನೆ ರಾತ್ರಿ ಗೋವಾದಲ್ಲಿ ನಿಧನರಾಗಿದ್ದಾರೆ. ಪತ್ನಿ, ಮಗ ಹಾಗೂ ಮಗಳನ್ನು ಅವರು ಅಗಲಿದ್ದಾರೆ.

ಮೂರು ಬಾರಿ ಲೋಕಸಭೆ ಸಂಸದರಾಗಿದ್ದ ಸತೀಶ್ ಶರ್ಮಾ ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. 1993 ರಿಂದ 1996ರ ಅವಧಿಯಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾಗಿದ್ದರು.

1947ರ ಅಕ್ಟೋಬರ್ 11ರಂದು ಆಂಧ್ರಪ್ರದೇಶದ ಸಿಕಂದರಾಬಾದ್‌ನಲ್ಲಿ ಇವರು ಜನಿಸಿದ್ದರು. 1983ರಲ್ಲಿ ರಾಜಕೀಯ ಸೇರಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಒತ್ತಾಯದ ಮೇರೆಗೆ ಇವರು ರಾಜಕೀಯ ಪ್ರವೇಶ ಮಾಡಿದ್ದರು. ಇದಕ್ಕೂ ಮುನ್ನ ಅವರು ವೃತ್ತಿಪರ ಕಮರ್ಷಿಯಲ್ ಪೈಲಟ್ ಆಗಿದ್ದರು. ಗಾಂಧಿ ಕುಟುಂಬಕ್ಕೆ ತುಂಬಾ ನಿಷ್ಠರಾಗಿದ್ದ ಶರ್ಮಾ ಅವರನ್ನು ರಾಜಕೀಯ ಕ್ಷೇತ್ರದ ಪರಿಚಯ ಮಾಡಿಸಿದ್ದು ರಾಜೀವ್‌ ಗಾಂಧಿಯವರು.

ರಾಜೀವ್ ಗಾಂಧಿ ಹತ್ಯೆ ಬಳಿಕ 1991ರಲ್ಲಿ ಅಮೇಥಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಿಂದ 2004ರವರೆಗೂ ಅವರು ರಾಯ್ ಬರೇಲಿ ಸಂಸದರಾಗಿದ್ದರು. ಬಳಿಕ ತಮ್ಮ ಕ್ಷೇತ್ರವನ್ನು ಸೋನಿಯಾ ಗಾಂಧಿಗಾಗಿ ಬಿಟ್ಟುಕೊಟ್ಟಿದ್ದರು. 2004ರ ಜುಲೈನಿಂದ 2016ರವರೆಗೂ ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

TRENDING