Saturday, April 17, 2021
Home ರಾಜಕೀಯ ಎಡಗೈ ಸಮುದಾಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ: ಹೆಚ್.ಆಂಜನೇಯ

ಇದೀಗ ಬಂದ ಸುದ್ದಿ

ಎಡಗೈ ಸಮುದಾಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ: ಹೆಚ್.ಆಂಜನೇಯ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ವಿಸ್ತರಣೆಯಾಗುತ್ತಿದ್ದಂತೆ ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಿದೆ. ಎಡಗೈ ಸಮುದಾಯದ ಕಾಂಗ್ರೆಸ್ ನಾಯಕರು ಸಹ ತಮ್ಮ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ಬೇಡಿಕೆ ಇಟ್ಟಿದ್ದಾರೆ.

ನಗರದ ಕೆಕೆ ಅತಿಥಿ ಗೃಹದಲ್ಲಿ ತಂಗಿರುವ ಸುರ್ಜೇವಾಲರನ್ನು ಭೇಟಿಯಾದ ಮಾಜಿ ಸಚಿವ ಹೆಚ್.ಆಂಜನೇಯ ನೇತೃತ್ವದ ಎಡಗೈ ಕಾಂಗ್ರೆಸ್ ಸಮುದಾಯದ ನಾಯಕರ ನಿಯೋಗ, ತಮ್ಮ ಬಲವಾದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಆಂಜನೇಯ, ಎಲ್. ಹನುಮಂತಯ್ಯ, ಆರ್.ಬಿ.ತಿಮ್ಮಾಪೂರ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಕೆಪಿಸಿಸಿ ಅಧ್ಯಕ್ಷರಿಂದ ಬೇಡಿಕೆ ಈಡೇರದೇ ಇದ್ದಿದ್ದರಿಂದ ಇದೀಗ ನೇರವಾಗಿ ಎಐಸಿಸಿ ಕಿವಿಗೆ ಈ ವಿಚಾರ ಮುಟ್ಟಿಸುವ ಪ್ರಯತ್ನ ಈ ನಾಯಕರು ಮಾಡಿದ್ದಾರೆ.

ಸುರ್ಜೇವಾಲಾರನ್ನು ಭೇಟಿಯಾದ ನಿಯೋಗ, ರಾಜ್ಯದಲ್ಲಿ ಸುಮಾರು 60 ಲಕ್ಷ ಎಡಗೈ ಸಮುದಾಯದ ಜನರಿದ್ದು, ಎಲ್ಲಾ ಸಮುದಾಯಗಳಿಗೂ ಕೆಪಿಸಿಸಿಯಲ್ಲಿ ಮಹತ್ವದ ಅವಕಾಶ ಕೊಡಲಾಗಿದೆ. ಹಿಂದಿನಿಂದಲೂ ಎಡಗೈ ಸಮುದಾಯ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದು, ನಮ್ಮ‌ಸಮುದಾಯಕ್ಕೊಂದು ಅವಕಾಶ ಕೊಡುವಂತೆ ಸುರ್ಜೇವಾಲಾ ಬಳಿ ಆಂಜನೇಯ ಮನವಿ ಸಲ್ಲಿಸಿದರು.

ಸಮುದಾಯದಲ್ಲಿ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದು, ಇಂತವರಿಗೆ ಅವಕಾಶ ಕೊಡಬೇಕೆಂದಿಲ್ಲ. ಯಾರಿಗೆ ಬೇಕಾದರೂ ಅವಕಾಶ ಕೊಡಬೇಕೆಂದು ಸುರ್ಜೇವಾಲಾ ಬಳಿ ಪ್ರಸ್ತಾಪಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಆಂಜನೇಯ, ನಮ್ಮ ದೇಶದ ಗ್ರೇಟ್ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ಜಾತಿಯವರಿಗೂ ಶೇ.10 ರಷ್ಟು ಮೀಸಲಾತಿ ಘೋಷಣೆ ಮಾಡಿದರು. ಯಾರ್ಯಾರು ಬಡವರಿದ್ದಾರೆ ಅವರಿಗೆ ಅನುಕೂಲ ಸಿಗಲಿ ಎಂದರು. ಆದರೆ ರಾಜ್ಯ ಸರ್ಕಾರ ಜಾತಿ ಜನಗಣತಿಯ ವರದಿ ಬಹಿರಂಗ ಪಡಿಸಬೇಕು‌. ಸದಾಶಿವ ಆಯೋಗ ವರದಿ ಜಾರಿಯಾಗಬೇಕು. ಆ ಮೂಲಕ ಎಡಗೈ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಬೇಕು. ಕಾಂತರಾಜು ವರದಿ ಹಾಗೂ ಸದಾಶಿವ ಆಯೋಗದ ವರದಿ ಎರಡೂ ಜಾರಿಯಾಗಬೇಕು‌ ಎಂದ ಅವರು, ಸದ್ಯಕ್ಕೆ ದಲಿತ ಸಮುದಾಯದ ಯಾವುದೇ ಸಮಾವೇಶ ಇಲ್ಲ. ಸಮಾವೇಶ ನಡೆಸುವ ಶಕ್ತಿ ನಮಗಿಲ್ಲ. ಸದ್ಯಕ್ಕೆ ಯಾವುದೇ ಸಮಾವೇಶವಿಲ್ಲ ಎಂದು ಸೂಚ್ಯವಾಗಿ ಹೇಳಿದರು.

TRENDING