Tuesday, April 13, 2021
Home ಸುದ್ದಿ ಜಾಲ ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತಕ್ಕೆ 3ನೇ ಸ್ಥಾನ!

ಇದೀಗ ಬಂದ ಸುದ್ದಿ

ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತಕ್ಕೆ 3ನೇ ಸ್ಥಾನ!

ನವದೆಹಲಿ, ಫೆ.18: ಜಗತ್ತಿನಲ್ಲೇ ಅತಿಹೆಚ್ಚು ಕೊರೊನಾವೈರಸ್ ಲಸಿಕೆ ವಿತರಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಇದುವರೆಗೂ 94 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಜನವರಿ.16ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ 33 ದಿನಗಳಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ 3ನೇ ರಾಷ್ಟ್ರ ಭಾರತವಾಗಿದೆ. ಅಮೆರಿಕಾ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಮೊದಲ ಹಂತದ ಲಸಿಕೆ ನಂತರ ದೇಶದಲ್ಲಿ ಇದೀಗ ಎರಡನೇ ಹಂತದ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ.

 ಭಾರತದಲ್ಲಿ ಜನವರಿ.16ರಂದು ಕೊರೊನಾವೈರಸ್ ಲಸಿಕೆ ವಿತರಣೆ ಮೊದಲ ಅಭಿಯಾನ ಆರಂಭವಾಗಿದ್ದು, ಈವರೆಗೂ 94,22,228 ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. 61,96,641 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 3,69,167 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 28,56,420 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಕೊವಿಡ್-19 ಲಸಿಕೆಯನ್ನು ನೀಡಲಾಗಿದೆ.

7 ರಾಜ್ಯದಲ್ಲಿ ಶೇ.58ರಷ್ಟು ಜನರಿಗೆ ಎರಡನೇ ಹಂತದ ಲಸಿಕೆ

ದೇಶದಲ್ಲಿ ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ನೀಡಿ 28 ದಿನಗಳ ನಂತರದ ಎರಡನೇ ಡೋಸ್ ಲಸಿಕೆ ನೀಡಲಾಗುತ್ತಿದೆ. ಭಾರತದ 7 ರಾಜ್ಯಗಳಲ್ಲಿ ಶೇ.58ರಷ್ಟು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ಕರ್ನಾಟಕ – 54,397, ತೆಲಂಗಾಣ – 53701, ಆಂಧ್ರ ಪ್ರದೇಶ – 35475, ಉತ್ತರ ಪ್ರದೇಶ – 18,394, ಒಡಿಶಾ – 18,248, ಗುಜರಾತ್ – 17,801, ಮತ್ತು ಮಹಾರಾಷ್ಟ್ರ – 16835 ಫಲಾನುಭವಿಗಳಿಗೆ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಹೊಸ ಪ್ರಕರಣಗಳ ಸಂಖ್ಯೆ 12 ಸಾವಿರದ ಗಡಿ ದಾಡಿದೆ. ಕಳೆದ 24 ಗಂಟೆಗಳಲ್ಲೇ 12881 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 1,09,50,201ಕ್ಕೆ ಏರಿಕೆಯಾಗಿದೆ. ಒಂದೇ ದಿನ 101 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1,56,014ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಶೇ.97ರಷ್ಟು ಕೊರೊನಾವೈರಸ್ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಜಗತ್ತಿನಲ್ಲೇ ಅತಿಹೆಚ್ಚು ಸೋಂಕಿತರನ್ನು ಗುಣಮುಖಗೊಳಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ 11,987 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,06,56,845 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ ಆರು ರಾಜ್ಯಗಳಲ್ಲೇ ಶೇ.85ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಕೇರಳ – 4835, ಮಹಾರಾಷ್ಟ್ರ – 3853, ಕರ್ನಾಟಕ – 537, ತಮಿಳುನಾಡು – 462, ಗುಜರಾತ್ – 273 ಮತ್ತು ಪಶ್ಚಿಮ ಬಂಗಾಳ – 249 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

TRENDING