Tuesday, April 13, 2021
Home ಸುದ್ದಿ ಜಾಲ ರಾಮಮಂದಿರಕ್ಕೆ ದೇಣಿಗೆ ಕೇಳಲು ಬಂದವರು ನನಗೆ ಬೆದರಿಕೆ ಹಾಕಿದ್ದರು: ಹೆಚ್ ಡಿ ಕುಮಾರಸ್ವಾಮಿ ಆರೋಪ

ಇದೀಗ ಬಂದ ಸುದ್ದಿ

ರಾಮಮಂದಿರಕ್ಕೆ ದೇಣಿಗೆ ಕೇಳಲು ಬಂದವರು ನನಗೆ ಬೆದರಿಕೆ ಹಾಕಿದ್ದರು: ಹೆಚ್ ಡಿ ಕುಮಾರಸ್ವಾಮಿ ಆರೋಪ

ಬೆಂಗಳೂರು: ನನ್ನ ಮನೆಗೆ ಮೂರು ವ್ಯಕ್ತಿಗಳು ಬಂದು ದೇಣಿಗೆ ಕೊಡಬೇಕೆಂದು ಕೇಳಿದ್ದರು. ಮಾತ್ರವಲ್ಲದೆ ‘ಕೊಡ್ತೀರೋ ಇಲ್ವೋ’ ಎಂದು ಬೆದರಿಕೆ ಹಾಕಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಣಿಗೆ ವಿಚಾರವಾಗಿ ಎಲ್ಲಿ ಬೇಕಾದರೂ ಮುಕ್ತವಾಗಿ ಚರ್ಚಿಸಲು ತಯಾರಾಗಿದ್ದೇನೆ. ನಮ್ಮ ಪಕ್ಷಕ್ಕೆ ಅನುಕೂಲ ಆಗಲು ಹೇಳಿಕೆ ನೀಡಿಲ್ಲ. ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ಹೋರಾಟ ಮಾಡಿಲ್ಲ. ನಮ್ಮದು ವಿಷಯಾಧಾರಿತ ಹೋರಾಟ ಎಂದರು.

ಕೊಡುವ ದೇಣಿಗೆಗೆ ಲೆಕ್ಕ ಕೊಡುವವರು ಯಾರು ?. ಕೆಲ‌ ಮನೆಗಳಿಗೆ ಮಾರ್ಕ್ ಮಾಡುತ್ತಿರುವುದನ್ನು ಪ್ರಶ್ನಿಸಿದ್ದೇನೆ. ಪ್ರೋತ್ಸಾಹ ತುಂಬುವುದಾದರೆ ಮನೆಗಳಿಗೆ ಯಾಕೆ ಮಾರ್ಕ್ ಮಾಡುತ್ತೀರಾ ? ರಸ್ತೆಗಳಲ್ಲಿ ದೊಡ್ಡ ಬ್ಯಾನರ್ ಗಳನ್ನ ಹಾಕಿ ಬೇಡ ಅಂದವರು ಯಾರು ? ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.

ಮೊಳೆ ಹೊಡೆಯೋ ಕೆಲಸ ಮಾಡುತ್ತಿರುವುದು ದೇಶ ರಕ್ಷಣೆಯ ಲೆಬಲ್ ನೊಂದಿಗೆ ಹೊರಟಿರುವವರು. ಇದನ್ನ ಹೇಳಲು ನನಗೆ ಯಾವುದೇ ಅಂಜಿಕೆ ಇಲ್ಲ ಪಾರದರ್ಶಕತೆ ಎನ್ನುವುದು ಎಲ್ಲಿದೆ ? ಬೇಕಾದಾಗ ಬಿಜೆಪಿ ಜೊತೆ ಸಂಬಂಧ ಬೆಳಸುತ್ತಾರೆ ಎನ್ನುತ್ತಾರೆ. ನಾನೇನಾದರೂ ಅಪರಾಧದ ಹೇಳಿಕೆ ನೀಡಿದ್ದೇನಾ ? ರಾಮನ ಹೆಸರಿಗೆ ತಪ್ಪಾಗುವಂತೆ ಹೇಳಿಕೆ ನೀಡಿರುವೆನಾ ? ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ. ಆದರೆ, ಬೀದಿ ಬೀದಿಯಲ್ಲಿ ಹಣ ಸಂಗ್ರಹ ಮಾಡೋದು ಯಾಕೆ ? ಯಾರು ಇದಕ್ಕೆ ಅನುಮತಿ ನೀಡಿರುವುದು. ಇವರಿಗೆ ಎಲ್ಲಿಂದ ಅನುಮತಿ ಸಿಕ್ಕಿದೆ. ಹಣ ಸಂಗ್ರಹಿಸಿ ಯಾರಿಗೆ ದುಡ್ಡು ಕೊಡ್ತಾರೆ ? ವಿಶ್ವ ಹಿಂದೂ ಪರಿಷತ್ ಗೆ ಸಂಗ್ರಹದ ಹಣ ಕೊಡ್ತಾರಾ ? ನಾವು ಚಿಲ್ಲರೆ ರಾಜಕೀಯ ಮಾಡಿಕೊಂಡು ಬಂದಿಲ್ಲ ಎಂದು ಕಿಡಿಕಾರಿದರು.

ಮೊನ್ನೆ ಶಿವಮೊಗ್ಗದಲ್ಲಿ ನಾನು ಕೊಟ್ಟ ಹೇಳಿಕೆ ವಿಚಾರವಾಗಿ ವಿವಿಧ ಸಂಘಟನೆಗಳು ಪ್ರತಿಕ್ರಿಯಿಸಿವೆ. ಇದನ್ನು ನಾನು ಗಮನಿಸಿದ್ದೇನೆ. ಸ್ವಯಂಪ್ರೇರಿತ ವಿಶ್ವ ಹಿಂದೂ ಪರಿಷತ್ ನವರು, ಕೆಲ ಸಚಿವರು ಹೇಳಿಕೆಗಳನ್ನ ಕೊಟ್ಟಿದ್ದಾರೆ. ಇನ್ನೂ ಕೆಲವರು ಜೆಡಿಎಸ್ ಅನ್ನು ಚಲಾವಣೆಗೆ ತರಲು ಬಾಲಿಶ ಹೇಳಿಕೆ ಕೊಟ್ಟಿದ್ದಾರೆ ಎಂತಾ ಹೇಳಿದ್ದಾರೆ. ದೇವೇಗೌಡರಿಗೆ ನಾಚಿಕೆ ಆಗಬೇಕೆನ್ನುತ್ತಾರೆ. ಯಾಕೆ ನಾಚಿಕೆ ಆಗಬೇಕು ? ಧರ್ಮವನ್ನು ಭ್ರಷ್ಟಾಚಾರಕ್ಕೆ ದೂಡುವ ಹೀನ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾವು ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಈ ಸಂಸ್ಕೃತಿ ಇವರದ್ದು. ನಮ್ಮದು ಏನಿದ್ದರೂ ಬೆಂಕಿ ಆರಿಸುವ ಸಂಸ್ಕೃತಿ. ನಾಜಿ ಸಂಸ್ಕೃತಿ ನನ್ನ ಹೇಳಿಕೆಯಲ್ಲ. ಈ ಹಿಂದೆಯೇ ಇತಿಹಾಸ ತಜ್ಞರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿದ್ದರಾ ? ದೇಶಕ್ಕೆ ನಿಮ್ಮ ಕೊಡುಗೆ ಏನಿದೆ ಏಳು ವರ್ಷಗಳಲ್ಲಿ ನಿಮ್ಮ ಸಾಧನೆಯೇನು ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಪೆಟ್ರೋಲ್ ದರ ಕೆಲ ದಿನಗಳಲ್ಲೇ ಮೂರು ಅಂಕಿಗೆ ತಲುಪಲಿದೆ. ಗ್ಯಾಸ್ ಗೆ ಉಜ್ವಲ ಯೋಜನೆ ಎನ್ನುತ್ತಿದ್ದಾರೆ. ಈಗ ಏನಾಗುತ್ತಿದೆ ಅನ್ನೋದು ಜನರಿಗೆ ಗೊತ್ತಿದೆ. ನಾನು ಲಘುವಾಗಿ ಯಾವುದನ್ನೂ ಹೇಳಿಲ್ಲ. ಸರಿಪಡಿಸಿಕೊಳ್ಳಿ ಅಂತಾ ಹೇಳಿದ್ದೇನೆ. ಮುಗ್ದ ಜನರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಹೆಚ್. ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

TRENDING