Saturday, March 6, 2021
Home ಅಂತರ್ ರಾಷ್ಟ್ರೀಯ ಟೆಕ್ಸಾಸ್ ನಲ್ಲಿ ಭಾರಿ ಚಳಿಯಿಂದ 21 ಸಾವು: ವಿದ್ಯುತ್ ಪೂರೈಕೆ ಸ್ಥಗಿತ

ಇದೀಗ ಬಂದ ಸುದ್ದಿ

ಟೆಕ್ಸಾಸ್ ನಲ್ಲಿ ಭಾರಿ ಚಳಿಯಿಂದ 21 ಸಾವು: ವಿದ್ಯುತ್ ಪೂರೈಕೆ ಸ್ಥಗಿತ

 ಟೆಕ್ಸಾಸ್, ಫೆ. 17: ಅಮೆರಿಕದ ಟೆಕ್ಸಾಸ್‌ನಲ್ಲಿ ತೀವ್ರ ಶೀತಗಾಳಿ ಕನಿಷ್ಠ 21 ಜನರನ್ನು ಬಲಿತೆಗೆದುಕೊಂಡಿದ್ದು, ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕದ ಆಗ್ನೇಯ ಭಾಗದಲ್ಲಿನ ಶೀತ ಚಂಡಮಾರುತದಿಂದ ಭಾರಿ ಅನಾಹುತ ಸಂಭವಿಸುತ್ತಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಲಕ್ಷಾಂತರ ಮಂದಿ ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ.

ಕಳೆದ ವಾರದವರೆಗೂ ಈ ರೀತಿಯ ಶೀತ ಮಾರುತ ಸುಳಿವೇ ಇರದ ಟೆಕ್ಸಾಸ್‌ನಲ್ಲಿನ ವಾತಾವರಣ ಜನರನ್ನು ನಡುಗಿಸಿದೆ. ಅಮೆರಿಕದ ಹಲವು ಭಾಗಗಳಿಗೆ ವಿಪರಿತ ಚಳಿ ಗಾಳಿ ಆವರಿಸಿದ್ದು, ಅನೇಕ ಕೊವಿಡ್ ಲಸಿಕೆ ಕೇಂದ್ರಗಳನ್ನು ಮುಚ್ಚುವಂತೆ ಮಾಡಿದೆ. ಇದರಿಂದ ಲಸಿಕೆ ಪೂರೈಕೆಗೂ ಅಡ್ಡಿಯಾಗಿದೆ.

ಟೆಕ್ಸಾಸ್‌ನಲ್ಲಿನ ವಿದ್ಯುತ್ ಘಟಕ ಪದೇ ಪದೇ ಕೈಕೊಡುತ್ತಿದ್ದು, ಬಹುತೇಕ ಭಾಗಗಳು ಕತ್ತಲಲ್ಲಿ ಮುಳುಗಿವೆ. ಮರಗಟ್ಟಿಸುವ ಹವಾಮಾನದಿಂದಾಗಿ ಪವನಶಕ್ತಿಯ ಟರ್ಬನ್‌ಗಳು ಸರಿಯಾಗಿ ತಿರುಗುತ್ತಿಲ್ಲ. ಇದರಿಂದ ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ವಿದ್ಯುತ್ ಇಲ್ಲದ ಕಾರಣ ಮನೆಗಳು, ಕಟ್ಟಡಗಳ ಒಳಗೆ ಸಹ ಶೀತ ತಡೆಯುವ ಸಾಧನಗಳ ಬಳಕೆ ಸಾಧ್ಯವಾಗುತ್ತಿಲ್ಲ.

ಟೆಕ್ಸಾಸ್, ಲಾವುಯಿಸಿಯಾನಾ, ಕೆಂಟುಕಿ ಮತ್ತು ಮಿಸ್ಸೋರಿಗಳಲ್ಲಿ ಕನಿಷ್ಠ 21 ಮಂದಿ ಕೊರೆಯುವ ಚಳಿಯಿಂದ ಮೃತಪಟ್ಟಿದ್ದಾರೆ. ಟೆಕ್ಸಾಸ್‌ನ ಸುಗರ್ ಲ್ಯಾಂಡ್‌ನಲ್ಲಿ ಮನೆಯೊಂದರಲ್ಲಿ ವಿದ್ಯುತ್ ಇಲ್ಲದ ವೇಳೆ ಚಳಿ ತಡೆಯಲು ಹಾಕಿದ್ದ ಬೆಂಕಿ ತೀವ್ರಗೊಂಡು ನಾಲ್ವರು ದಹನವಾಗಿದ್ದಾರೆ.

ಚಳಿಯ ತೀವ್ರತೆ ಅಧಿಕವಾಗಿರುವ ರಾಜ್ಯಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಜೋ ಬೈಡನ್ ಸೂಚಿಸಿದ್ದಾರೆ.

TRENDING