Tuesday, March 9, 2021
Home ರಾಜ್ಯ ಲಾರಿ ಕಳವು ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದ ಮೂವರು ಆರೋಪಿಗಳ ಬಂಧನ

ಇದೀಗ ಬಂದ ಸುದ್ದಿ

ಲಾರಿ ಕಳವು ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದ ಮೂವರು ಆರೋಪಿಗಳ ಬಂಧನ

 ಶಿರಾದಲ್ಲಿ ಲಾರಿ ಕಳವು ಮಾಡಿದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಶಿರಾ ಪೊಲೀಸರು ಬಂಧಿಸಿದ್ದಾರೆ. 2020ರ ಫೆ.22/23ರಂದು ರಾತ್ರಿ ವೇಳೆಯಲ್ಲಿ ಶಿರಾ ನಗರದ ಸಂತೇಪೇಟೆ ಸರ್ಕಾರಿ ಶಾಲೆ ಮುಂಭಾಗದ  ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 11 ಲಕ್ಷ ರೂ. ಮೌಲ್ಯದ KA 64- 3627ನೇ ನಂಬರಿನ 12 ಚಕ್ರದ ಅಶೋಕ್ ಲೇಲ್ಯಾಂಡ್ ಲಾರಿಯನ್ನು ಕಳ್ಳರು ಕದ್ದೊಯ್ದಿದ್ದರು. ಈ‌ ಬಗ್ಗೆ ಲಾರಿಯ ಮಾಲಿಕ ಸ ನಾಗರಾಜು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರ ತನಿಖೆ ನಡೆಸಿದ ‌ಪೊಲೀಸರು ವರ್ಷ ತುಂಬುವ ವೇಳೆಗೆ ಕಾರಿ ಹಾಗೂ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ.

ಆರೋಪಿಗಳಾದ ಎಸ್.ಮಣಿಕಂಠನ್ ಅಲಿಯಾಸ್ ರಮೇಶ್ ಕುಮಾರ್, ಮನೋಜ್ ತಿರಕಿ ಅಲಿಯಾಸ್ ಮೈಕೆಲ್ ಎಂಬಿಬ್ಬರು ಲಾರಿಯನ್ನು ಕಳವು ಮಾಡಿ, ತಮಿಳುನಾಡಿನ ಸೇಲಂಗೆ ಕೊಂಡೊಯ್ದಿದ್ದರು. ಅಲ್ಲಿ ಪಳನಿ ಸ್ವಾಮಿ ಮತ್ತು ಸೆಂಥಿಲ್ ನಾಥನ್ ಎಂಬ ವಕೀಲರಿಗೆ ಮಾರಾಟ ಮಾಡಿದ್ದರು, ಈ ಇಬ್ಬರೂ ಪ್ರಸಾಥ್ ಮತ್ತು ಬಾಷಾ ಎಂಬುವರಿಗೆ ಮಾರಾಟ ಮಾಡಿದ್ದರು.

ಪ್ರಸಾಥ್ ಮತ್ತು ಬಾಷಾ ಅವರು ಲಾರಿಯ ಇಂಜಿನ್ ನಂಬರ್ ಹಾಗೂ ಚಾಸಿಸ್ ನಂಬರ್ ಗಳನ್ನು ಮತ್ತು ಆರ್.ಸಿ‌ ನಂಬರ್ ಗಳನ್ನು ಬದಲಾಯಿಸಿ, ಮೇಲ್ನೋಟಕ್ಕೆ ಮೂಲ ವಾಹನದ ಸ್ವರೂಪ ಗೊತ್ತಾಗದಂತೆ ಬದಲಾಯಿಸಿದ್ದರು.

ಇಷ್ಟೇ ಅಲ್ಲದೇ ಲಾರಿಯ ನೋಂದಣಿ ಸಂಖ್ಯೆಯನ್ನು TN 04- AX 0326 ಎಂದು ಬದಲಾಯಿಸಿ ವೇಲೂರು ಜಿಲ್ಲೆ, ಕಾಟಪಾಡಿ ತಾಲ್ಲೂಕು, ಕೃಷ್ಣ ಪುರಂ ಗ್ರಾಮದ ಕುಮಾರ್ ಆರ್.(35), ಎಂಬಾತನಿಗೆ 12.60 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು. ಸದ್ಯ ಪೊಲೀಸರು ಲಾರಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿಗಳ ಪೈಕಿ ತಮಿಳುನಾಡಿನ ಮಣಿಕಂಠನ್(51), ಮಹಾರಾಷ್ಟ್ರದ ಮನೋಜ್ ತಿರಕಿ(38) ಹಾಗೂ ತಮಿಳುನಾಡಿನ ಪಳನಿ ಸ್ವಾಮಿ(67) ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಉಳಿದಂತೆ ತಮಿಳುನಾಡಿನ ಸೆಂಥಿಲ್ ನಾಥನ್(45), ಪ್ರಸಾಥ್(44) ಹಾಗೂ ಬಾಷಾ (44) ಅವರು ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪೊಲೀಸರಿಗೆ ಅಭಿನಂದನೆ;

ಕಳುವಾಗಿದ್ದ ಲಾರಿ ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಶ್ರಮಿಸಿದ ಜಿಲ್ಲಾ ಎಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್ ಅವರ ಮಾರ್ಗದರ್ಶನದಲ್ಲಿ ಶಿರಾ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕುಮಾರಪ್ಪ ಎಲ್., ನೇತೃತ್ವದಲ್ಲಿ ಶಿರಾ ನಗರ ಪೊಲೀಸ್ ಠಾಣೆಯ ಪಿ.ಐ ಪಿ.ಬಿ ಹನುಮಂತಪ್ಪ ಮತ್ತು ಪಿಎಸ್ಐಗಳಾದ ಅವಿನಾಶ್, ಭಾರತಿ ಹಾಗೂ ಸಿಬ್ಬಂದಿ ಕುಮಾರ್, ಬಸವರಾಜ್, ದುರ್ಗಯ್ಯ, ನಾಗರಾಜು, ಗೋಪಿನಾಥ್, ಮಂಜುನಾಥ್ ಮತ್ತು ಶಿವಕುಮಾರ್ ಅವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಕೆ ವಂಶಿಕೃಷ್ಣ ಅವರು ಅಭಿನಂದಿಸಿದ್ದಾರೆ

ಶ್ರೀಮಂತ್ ಶಿರಾ

ವಿ ನ್ಯೂಸ್24 ಕನ್ನಡ

ತುಮಕೂರು ಜಿಲ್ಲೆ

TRENDING