Saturday, April 17, 2021
Home ಸುದ್ದಿ ಜಾಲ ರಾಮನ ಹೆಸರಲ್ಲಿ ಪೋಲಿ ಪುಂಡರಿಂದ ಹಣ ಸಂಗ್ರಹ ; ಹೆಚ್.ಡಿ.ಕೆ

ಇದೀಗ ಬಂದ ಸುದ್ದಿ

ರಾಮನ ಹೆಸರಲ್ಲಿ ಪೋಲಿ ಪುಂಡರಿಂದ ಹಣ ಸಂಗ್ರಹ ; ಹೆಚ್.ಡಿ.ಕೆ

ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರವಾಗಿ ತಮ್ಮ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಪಾರದರ್ಶಕತೆಯಿಂದ ಹಣ ಸಂಗ್ರಹ ಮಾಡಲಿ. ಆದರೆ ಪೋಲಿ ಪುಂಡರು ಕೂಡ ಬೀದಿ ಬೀದಿಯಲ್ಲಿ ದೇವರ ಹೆಸರಲ್ಲಿ ಹಣ ಸಂಗ್ರಹ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಲ ವ್ಯಕ್ತಿಗಳು ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಧಾರ್ಮಿಕ ಭ್ರಷ್ಟಾಚಾರ. ದೇವರು, ಧರ್ಮದ ಹೆಸರಲ್ಲಿ ಜನರ ಭಾವನೆಗಳನ್ನು ಮುಂದಿಟ್ಟು ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಮೊದಲು ನಿಲ್ಲಲಿ ಈ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಆಗ್ರಹಿಸಿದರು.

ಅಂದು ನಾನು ಶಿವಮೊಗ್ಗದಲ್ಲಿ ನೀಡಿದ್ದ ಹೇಳಿಕೆಯಲ್ಲಿ ಸರ್ಕಾರವನ್ನಾಗಲಿ, ಬಿಜೆಪಿಯನ್ನಾಗಲಿ ನಾನು ಬೈದಿಲ್ಲ. ಅಥವಾ ರಾಮನಿಗೆ ಅವಮಾನವಾಗುವ ಪದ ಬಳಕೆಯನ್ನೂ ಮಾಡಿಲ್ಲ. ಕೆಲ ವ್ಯಕ್ತಿಗಳು ದೇಣಿಗೆ ಹೆಸರಲ್ಲಿ ಹಣ ದುರುಪಯೋಗ ಮಾಡುತ್ತಿದ್ದಾರೆ ಎಂದಿದ್ದೇನೆ. ದೇಣಿಗೆ ನೀಡದವರ ಮನೆಗಳಿಗೆ ಅಥವಾ ದೇಣಿಗೆ ಕೊಟ್ಟ ಮನೆಗಳಿಗಾದರೂ ಸ್ಟಿಕ್ಕರ್ ಅಂಟಿಸುವುದು ಯಾಕೆ ಎಂದು ಪ್ರಶ್ನಿಸಿದ್ದೇನೆ. ಸ್ಟಿಕ್ಕರ್ ಅಂಟಿಸುವುದು ಪ್ರೇರಣೆ ನೀಡಲೆಂದೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಾವೆಂದೂ ಶ್ರೀರಾಮ, ಧರ್ಮದ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ಧರ್ಮದ ಹೆಸರಲ್ಲಿ ನಾನು ಭ್ರಷ್ಟಾಚಾರವನ್ನೂ ಮಾಡಿಲ್ಲ. ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿರುವವರು ನೀವು. ಅಂದಿನಿಂದಲೂ ರಾಮನ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದೀರಿ ಎಂದು ಗುಡುಗಿದರು.

ನಾವು ಸ್ವಾಭಿಮಾನದಿಂದ ಬದುಕಿದ್ದೇವೆ. ನಿಮ್ಮ ಹಾಗೆ ನಾವು ಅಭಿಮಾನ ಶೂನ್ಯರಲ್ಲ. ರಾಮನ ಹೆಸರಲ್ಲಿ ಯಾರೆಂದರೆ ಅವರು ದೆಣಿಗೆ ಸಂಗ್ರಹಿಸಲು ಅವರಿಗೆ ಅಧಿಕಾರ ಕೊಟ್ಟಿದ್ಯಾರು? ಅವರು ಹಣ ಸಂಗ್ರಹಿಸಿ ದೇವಾಲಯ ನಿರ್ಮಾಣಕ್ಕೆ ಕೊಡುತಿದ್ದಾರಾ? ಹಣ ಸಂಗ್ರಹ ಪಾರದರ್ಶಕವಾಗಿರಬೇಕು. ವಿ ಹೆಚ್ ಪಿ ಇವರಿಗೆ ಲೈಸನ್ಸ್ ಕೊಟ್ಟಿದೆಯೇ? ಮನೆಗಳಿಗೆ ಸ್ಟಿಕರ್ ಅಂಟಿಸುವುದು ಯಾಕೆ ಪ್ರೇರಣೆ ನೀಡಲಾ? ಹಾಗಾದರೆ ಪಾರದರ್ಶಕತೆ ಎಂಬುದು ಎಲ್ಲಿದೆ? ಇದು ಧಾರ್ಮಿಕ ಭ್ರಷ್ಟಾಚಾರವಲ್ಲವೇ? ಹಣ ದುರುಪಯೋಗವಾಗುತ್ತಿದೆ ಎಂದು ನಾನು ಮಾಹಿತಿ ನೀಡಿದ್ದೇನೆ ಅಷ್ಟೇ. ಈ ಬಗ್ಗೆ ಗಮನಹರಿಸಿ ಇದನ್ನು ತಡೆಯುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಒಂದು ವಿಚಾರ ಸ್ಪಷ್ಟವಾಗಿ ಹೇಳುತ್ತಿದ್ದೇನೆ ರಾಮ ಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ರಾಮ ಮಂದಿರ ನಿರ್ಮಾಣವಾಗಬೇಕು. ಆದರೆ ಅದೇ ಹೆಸರಿನಲ್ಲಿ, ಭಕ್ತಿ-ಭಾವದ ಹೆಸರಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧವಿದೆ ಎಂದು ತಿಳಿಸಿದರು.

TRENDING