Sunday, February 28, 2021
Home ಕ್ರೈಂ ನ್ಯೂಸ್ ಯಾದಗಿರಿ : ಆಸ್ತಿ ವಿಚಾರಕ್ಕೆ ಅಣ್ಣನ ಮಗನನ್ನೇ ಕೊಚ್ಚಿ ಕೊಂದ ಚಿಕ್ಕಪ್ಪ

ಇದೀಗ ಬಂದ ಸುದ್ದಿ

ಯಾದಗಿರಿ : ಆಸ್ತಿ ವಿಚಾರಕ್ಕೆ ಅಣ್ಣನ ಮಗನನ್ನೇ ಕೊಚ್ಚಿ ಕೊಂದ ಚಿಕ್ಕಪ್ಪ

ಯಾದಗಿರಿ: ಹಾವಿನ ದ್ವೇಷ 12 ವರ್ಷ ಎಂಬಂತೆ ಆಸ್ತಿ ವಿಚಾರದ 10 ವರ್ಷದ ದ್ವೇಷಕ್ಕೆ ಒಂದು ಹೆಣ ಬಿದ್ದಿದೆ. ಅಣ್ಣನ ಮಗನನ್ನೇ ಚಿಕ್ಕಪ್ಪ ಕೊಚ್ಚಿ ಕೊಲೆ ಮಾಡಿ ತನ್ನಿಬ್ಬರು ಮಕ್ಕಳೊಂದಿಗೆ ಈಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಯಾದಗಿರಿ ಜಿಲ್ಲೆಯ ಸುರಪುರ ನಗರದ ಹೊರಭಾಗದ ರಾಜಾವೆಂಕಟಪ್ಪ ನಾಯಕ ವೃತ್ತದ ಸಮೀಪದ ದೀವಳಗುಡ್ಡ ಪ್ರದೇಶದಲ್ಲಿ ಹಾಡಹಗಲೇ ಕೊಲೆ ದುರ್ಘಟನೆ ಜರುಗಿದೆ. ದೀವಳಗುಡ್ಡ ಗ್ರಾಮದ ನಿವಾಸಿ ಶಿವರಾಜನನ್ನು ಆತನ ಚಿಕ್ಕಪ್ಪನಾದ ತಾತಪ್ಪ, ತಾತಪ್ಪನ ಮಕ್ಕಳಾದ ರಾಘವೇಂದ್ರ ಹಾಗೂ ರಾಜಕುಮಾರ ಸೇರಿ ಹಾಡಹಗಲೇ ಚಾಕುನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ನಿನ್ನೆ ಬೆಳಿಗ್ಗೆ ತರಕಾರಿ ವ್ಯಾಪಾರ ಮುಗಿಸಿಕೊಂಡು ತನ್ನ ಮನೆ ಕಡೆ ಶಿವರಾಜ ಬರುತ್ತಿದ್ದ. ಈ ವೇಳೆ ವಿವಾದಿತ ನಿವೇಶನದ ಜಾಗದಲ್ಲಿ ತಾತಪ್ಪ ಶೆಡ್ ನಿರ್ಮಾಣ ಮಾಡಲು ಮುಂದಾಗಿ ಕಬ್ಬಿಣದ ರಾಡ್ ಗಳನ್ನು ಹಾಕಿದನು. ಈ ವೇಳೆ ಶಿವರಾಜ ತನ್ನ ಚಿಕ್ಕಪ್ಪನಿಗೆ ಈ ಜಾಗ ನಮಗೆ ಸೇರುತ್ತದೆ ನಮ್ಮ ಜಾಗದಲ್ಲಿ ನೀವು‌ ಯಾಕೆ ಹಾಕಿ ಶೆಡ್ ನಿರ್ಮಾಣ ಮಾಡುತ್ತೀರಿ? ನಮ್ಮ ಹೆಸರಿನಲ್ಲಿ ಮಾಡಲು ಸಹಿ‌ ಮಾಡಬೇಕೆಂದು ತನ್ನ ಚಿಕ್ಕಪ್ಪನಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ತಾತಪ್ಪ ಹಾಗೂ ತಾತಪ್ಪನ ಮಕ್ಕಳಾದ ರಾಘವೇಂದ್ರ, ರಾಜಕುಮಾರ ಅವರು ಏಕಾಏಕಿ ಶಿವರಾಜನಿಗೆ ಹೊಡೆದು ಜಗಳ ಆರಂಭ ಮಾಡಿದ್ದಾರೆ. ನಂತರ ವಿವಾದಿತ ನಿವೇಶನದ ಜಾಗದಲ್ಲಿಯೇ ಚಾಕುವಿನಿಂದ ಇರಿದು‌ ಕೊಚ್ಚಿ ಕೊಲೆ ಮಾಡಿದ್ದಾರೆ. ಶಿವರಾಜನ ಮನೆ ಮುಂಭಾಗದಲ್ಲಿಯೇ ಶಿವರಾಜನ ಕೊಲೆ ಮಾಡಲಾಗಿದೆ. ದೀವಳಗುಡ್ಡದ ನಿವಾಸಿ‌ ನಿಂಗಪ್ಪ ಹಾಗೂ ಮಲ್ಲಮ್ಮ ದಂಪತಿಗಳಿಗೆ ಐದು ಜನ ಮಕ್ಕಳಿದ್ದಾರೆ. ಕಳೆದ 6 ತಿಂಗಳ ಹಿಂದೆ ನಿಂಗಪ್ಪ ನಿಧನಹೊಂದಿದ್ದರು. ಶಿವರಾಜ ರಾಜಾವೆಂಕಟಪ್ಪ ನಾಯಕ ವೃತ್ತದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಬಂದಷ್ಟು ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದ. ಇಡೀ ಕುಟುಂಬಕ್ಕೆ ಶಿವರಾಜ ಆಶ್ರಯವಾಗಿದ್ದ. ಆದರೆ, ಶಿವರಾಜ ಕೊಲೆಯಾದ ಕಾರಣ ಇಡೀ ಕುಟುಂಬ ಈಗ ಕಣ್ಣೀರಾಗಿದೆ.

ಕೊಲೆಯಾದ ಶಿವರಾಜನ ಅಜ್ಜನಾದ ಪಿಡ್ಡಪ್ಪನ ವಂಶಾವಳಿ ಆಸ್ತಿ 2 ಎಕರೆ 20 ಗುಂಟೆ ಇತ್ತಂತೆ. ಪಿಡ್ಡಪ್ಪನಿಗೆ ನಿಂಗಪ್ಪ, ಮರೇಪ್ಪ ಹಾಗೂ ತಾತಪ್ಪ ಎಂಬ ಈ ಮೂವರು ಮಕ್ಕಳಿದ್ದಾರೆ. ಆದರೆ ಆಸ್ತಿ ಮೂವರಿಗೆ ಸೇರಬೇಕು. ಆದರೆ, ತಾತಪ್ಪ ನಕಲಿ ವಂಶಾವಳಿ ಸೃಷ್ಟಿ ಮಾಡಿ ತಾನೊಬ್ಬನೇ ಮಗನಿದ್ದು ಎಲ್ಲವೂ‌ ತನಗೆ ಸೇರಬೇಕೆಂದು ನಕಲಿ ದಾಖಲೆ ‌ಸೃಷ್ಟಿ ಮಾಡಿ ಆಸ್ತಿ ತನ್ನ ಹೆಸರಿನ‌ಲ್ಲಿ ಮಾಡಿಕೊಂಡಿದ್ದಾನಂತೆ. ಈ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ನಡೆದಿದೆ. ನಂತರ ಆಸ್ತಿ ವಿಚಾರ‌ ಕೋರ್ಟ್ ನಲ್ಲಿದೆ. ಮೂವರು ಅಣ್ಣ ತಮ್ಮಂದಿರಿಗೆ ತಲಾ 11 ನಿವೇಶನಗಳು ತಮ್ಮ ಪಾಲಿಗೆ ಬರಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ಯ ಹೆದ್ದಾರಿ ಪಕ್ಕದಲ್ಲೇ ನಿವೇಶನ ಇರುವದರಿಂದ ಈಗ ನಿವೇಶನಗಳಿಗೆ ಕೋಟ್ಯಾಂತರ ರೂ ಬೆಲೆ ಬಾಳುತ್ತದೆ. ಆದರೆ, ತಾತಪ್ಪ ಕೋಟ್ಯಾಂತರ ರೂ ಆಸ್ತಿ ಜಾಗದ ಮೇಲೆ ಕಣ್ಣು ಹಾಕಿ ಆಸ್ತಿ ವಿಚಾರ ಪ್ರಸ್ತಾಪ ಮಾಡಿದ ತನ್ನ ಸಹೋದರನ ಪುತ್ರನಿಗೆ ಈಗ ಬಲಿ ಪಡೆದಿದ್ದಾನೆ.

ಈ ಬಗ್ಗೆ ಕೊಲೆಯಾದ ಶಿವರಾಜನ ತಾಯಿ ಮಾತನಾಡಿ, ನಮ್ಮ ‌ಪಾಲಿನ ಆಸ್ತಿ ಕೇಳಿದರೆ ತಾತಪ್ಪ, ಹಾಗೂ ತಾತಪ್ಪನ ಮಕ್ಕಳಾದ ರಾಘವೇಂದ್ರ, ರಾಜಕುಮಾರ ಸೇರಿ ನನ್ನ ಮಗನಿಗೆ ಚಾಕು ಹಾಕಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.
ಘಟನಾ ಸ್ಥಳಕ್ಕೆ ಸುರಪುರ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ, ಸಿಪಿಐ ಶ್ರೀನಿವಾಸ ಅಲ್ಲಿಪುರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊಲೆ ಮಾಡಿದ ತಕ್ಷಣವೇ ಅಲರ್ಟ್ ಆದ ಪೊಲೀಸರು ಕೊಲೆ ಮಾಡಿದ ಆರೋಪಿಗಳಾದ ತಾತಪ್ಪ, ರಾಘವೇಂದ್ರ ಹಾಗೂ ರಾಜಕುಮಾರ ಅವರನ್ನು ಬಂಧಿಸಿದ್ದಾರೆ. ಮೃತರ ಸಂಬಂಧಿಕರ ಅಕ್ರಂದ‌ನ ಮುಗಿಲು ಮುಟ್ಟಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING