Tuesday, April 13, 2021
Home ಸುದ್ದಿ ಜಾಲ ‘ಮ್ಯಾಪಿಂಗ್’ ನೀತಿಯಲ್ಲಿ ಭಾರಿ ಬದಲಾವಣೆ ಪ್ರಕಟಿಸಿದ ಕೇಂದ್ರ ಸರ್ಕಾರ

ಇದೀಗ ಬಂದ ಸುದ್ದಿ

‘ಮ್ಯಾಪಿಂಗ್’ ನೀತಿಯಲ್ಲಿ ಭಾರಿ ಬದಲಾವಣೆ ಪ್ರಕಟಿಸಿದ ಕೇಂದ್ರ ಸರ್ಕಾರ

ನವದೆಹಲಿ, ಫೆ.15: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ದೇಶದ ‘ಮ್ಯಾಪಿಂಗ್ ಪಾಲಿಸಿ’ಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಸೋಮವಾರ ಪ್ರಕಟಿಸಿದೆ. ನಿರ್ದಿಷ್ಟವಾಗಿ ಭಾರತೀಯ ಕಂಪೆನಿಗಳಿಗೆ ಅನುಕೂಲಕರವಾಗುವಂತೆ ಅತ್ಮನಿರ್ಭರ ಭಾರತ್ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

‘ಜಾಗತಿಕವಾಗಿ ಲಭ್ಯವಿರು ಸಿದ್ಧಮಾದರಿಗಳು ಭಾರತದಲ್ಲಿ ನಿರ್ಬಂಧಿತವಾಗಬೇಕಿಲ್ಲ. ಹೀಗಾಗಿ ಇದುವರೆಗೂ ನಿರ್ಬಂಧಕ್ಕೆ ಒಳಗಾಗುತ್ತಿದ್ದ ಭೂಪ್ರಾದೇಶಿಕ ದತ್ತಾಂಶಗಳು ಭಾರತದಲ್ಲಿಯೂ ಮುಕ್ತವಾಗಿ ಲಭ್ಯವಾಗಲಿವೆ’ ಎಂದು ಸಚಿವಾಲಯ ಹೇಳಿಕೆ ನೀಡಿದೆ.

ದೇಶದ ಕಾರ್ಪೊರೇಷನ್‌ಗಳು ಮತ್ತು ಹೂಡಿಕೆದಾರರು ಇನ್ನು ಮುಂದೆ ನಿಬಂಧನೆಗಳಿಗೆ ಒಳಪಡುವುದಿಲ್ಲ ಮತ್ತು ಅವರು ಭಾರತದ ಭೂಪ್ರದೇಶದ ಒಳಗೆ ಡಿಜಿಟಲ್ ಜಿಯೋಸ್ಪೇಷಿಯಲ್ ದತ್ತಾಂಶ ಹಾಗೂ ನಕಾಶೆಗಳನ್ನು ಸಂಗ್ರಹಿಸುವ, ಸೃಷ್ಟಿಸುವ, ಸಿದ್ಧಪಡಿಸುವ, ಸಂಗ್ರಹಿಸುವ, ಪ್ರಕಟಿಸುವ, ಪ್ರಸಾರ ಮಾಡುವ ಹಾಗೂ ಪರಿಷ್ಕರಿಸುವ ಕಾರ್ಯಗಳಿಗೆ ಪೂರ್ವ ಮಾಹಿತಿ ಪಡೆಯುವ ಅಗತ್ಯವಿಲ್ಲ ಎಂದು ಅದು ತಿಳಿಸಿದೆ.

‘ನಮ್ಮ ಸರ್ಕಾರವು ಡಿಜಿಟಲ್ ಇಂಡಿಯಾಕ್ಕೆ ಭಾರಿ ಉತ್ತೇಜನ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಜಿಯೋಸ್ಪೇಷಿಯಲ್ ದತ್ತಾಂಶಗಳ ಸ್ವಾಧೀನ ಮತ್ತು ಉತ್ಪಾದನೆಯ ನಿರ್ವಹಣಾ ನೀತಿಗಳಲ್ಲಿನ ಉದಾರೀಕರಣವು ನಮ್ಮ ಆತ್ಮನಿರ್ಭರ ಭಾರತ್‌ನ ಗುರಿಯಲ್ಲಿ ಬೃಹತ್ ಹೆಜ್ಜೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

TRENDING