Saturday, April 17, 2021
Home ಸುದ್ದಿ ಜಾಲ ಮಠಾಧಿಪತಿಗಳು ಬೀದಿಗಿಳಿದು ಹೋರಾಟ ಮಾಡಬಾರದು : ವಾಟಾಳ್ ನಾಗರಾಜ್

ಇದೀಗ ಬಂದ ಸುದ್ದಿ

ಮಠಾಧಿಪತಿಗಳು ಬೀದಿಗಿಳಿದು ಹೋರಾಟ ಮಾಡಬಾರದು : ವಾಟಾಳ್ ನಾಗರಾಜ್

ಬೆಂಗಳೂರು, ಫೆ.15- ಮಠಾಧಿಪತಿಗಳು ಯಾವುದೇ ಕಾರಣಕ್ಕೂ ಬೀದಿಗಿಳಿಯಬಾರದು. ಜಾತಿಗೆ ಸೀಮಿತರಾಗಿ ಹೋರಾಟ ಮಾಡದೆ ಜಾತ್ಯತೀತವಾಗಿರಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಹೇಳಿದರು.ಯಾವುದೇ ಮಠಾಧಿಪತಿಗಳು ಬೀದಿಗಿಳಿದು ಹೋರಾಟ ಮಾಡಬಾರದೆಂದು ಒತ್ತಾಯಿಸಿ ಮಹಾತ್ಮಗಾಂ ಪ್ರತಿಮೆ ಬಳಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೀಸಲಾತಿಗೆ ಆಗ್ರಹಿಸಿ ಅಥವಾ ಇನ್ನಾವುದೋ ಕಾರಣಕ್ಕೆ ಮಠಾಪತಿಗಳು ಬೀದಿಗಿಳಿದು ಹೋರಾಟ ಮಾಡುವುದು ಬೇಡ. ಸ್ವಾಮೀಜಿಗಳು ಈ ರೀತಿ ಬೀದಿಗಿಳಿದು ಹೋರಾಟ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಮಠದಲ್ಲಿ ಕುಳಿತು ಚರ್ಚೆ ಮಾಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಪ್ರಸ್ತುತ ರಾಜಕಾರಣಿಗಳೆಲ್ಲ ಜಾತಿವಾದಿಗಳಾಗಿದ್ದಾರೆ.

ಬೇರೆ ರಾಜ್ಯಗಳಲ್ಲಿ ಭಾಷೆ ರಾಜಕಾರಣ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಸ್ವಾಮೀಜಿಗಳು ಭಾಷೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಬಸವಣ್ಣ ಸಮ ಸಮಾಜ ದುರುಪಯೋಗವಾಗುತ್ತಿದೆ. ರಾಜಕೀಯ ವ್ಯಕ್ತಿಗಳ ಮಾತು ಕೇಳಿದರೆ ಈ ರೀತಿ ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲದಕ್ಕೂ ರಾಜಕಾರಣಿಗಳೇ ಕಾರಣ ಎಂದು ವಾಟಾಳ್ ಹೇಳಿದರು.

ಅಧಿಕಾರದ ಅಸ್ತಿತ್ವಕ್ಕಾಗಿ ರಾಜಕಾರಣಿಗಳು, ಮಠಾಪತಿಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಮುತ್ಸದ್ಧಿ ರಾಜಕಾರಣಿಗಳ ಕೊರತೆಯಿಂದ ಇಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

TRENDING