Saturday, April 17, 2021
Home ಸುದ್ದಿ ಜಾಲ ಹಿಮಪಾತ ಅವಘಡ:ಮೃತರ ಸಂಖ್ಯೆ 46ಕ್ಕೆ ಏರಿಕೆ

ಇದೀಗ ಬಂದ ಸುದ್ದಿ

ಹಿಮಪಾತ ಅವಘಡ:ಮೃತರ ಸಂಖ್ಯೆ 46ಕ್ಕೆ ಏರಿಕೆ

ತಪೋವನ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತ, ನಂತರದ ಪ್ರವಾಹದ ತೀವ್ರತೆ ಸಿಲುಕಿದ್ದ ರೈನಿ ವಿದ್ಯುತ್ ಯೋಜನೆ ಸ್ಥಳದಿಂದ ಭಾನುವಾರ ಎಂಟು ಶವಗಳನ್ನು ಹೊರತೆಗೆಯಲಾಗಿದೆ.

ಇದರೊಂದಿಗೆ ಅವಘಡದಲ್ಲಿ ಮೃತರಾದವರ ಸಂಖ್ಯೆ 46ಕ್ಕೆ ಏರಿದೆ. ಇನ್ನೂ 158 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಹಾಗೂ ಸಿಲುಕಿಕೊಂಡವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಕ್ರಿಯೆ ಮುಂದುವರಿದಿದೆ.

ಎನ್‌ಟಿಪಿಸಿಯ 520 ಮೆಗಾವಾಟ್‌ನ ತಪೋವನ್‌-ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ ಐವರ ಶವ ಪತ್ತೆಯಾದವು. ಕೆಸರು ತೆರವು ಮತ್ತು ಸುರಂಗ ತೋಡುವ ಕಾರ್ಯ ಪ್ರಗತಿಯಲ್ಲಿರುವ ಕಡೆ ಶವ ದೊರೆತವು. ಉಳಿದ ಮೂರು ಶವಗಳು 13.2 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಯ ರೈನಿ ಸ್ಥಳದಲ್ಲಿ ಪತ್ತೆಯಾದವು.

ತಪೋವನ್‌ ಬಳಿ ನಿರ್ಮಿಸಲಾಗಿರುವ ತಾತ್ಕಾಲಿಕ ಶವಾಗಾರದಲ್ಲಿ ಮೃತದೇಹಗಳನ್ನು ‌ಇಡಲಾಗಿದೆ. ಮೃತರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ. ಒಬ್ಬರು ಟೆಹ್ರಿ ಜಿಲ್ಲೆಯ ನರೇಂದ್ರ ನಗರ ನಿವಾಸಿಯಾಗಿದ್ದರೆ, ಮತ್ತೊಬ್ಬರು ಡೆಹ್ರಾಡೂನ್‌ನ ಕಾಲ್ಸಿ ನಿವಾಸಿ ಎಂದು ಜಿಲ್ಲಾಧಿಕಾರಿ ಸ್ವಾತಿ ಎಸ್‌.ಭಡೌರಿಯಾ ಅವರು ತಿಳಿಸಿದರು.

ಮುಂಜಾಗ್ರತೆಯಾಗಿ ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆಗುವಂತೆ ಸ್ಥಳದಲ್ಲಿ ಹೆಲಿಕಾಪ್ಟರ್ ಅನ್ನೂ ಸಜ್ಜಾಗಿ ಇರಿಸಲಾಗಿದೆ ಎಂದು ಅವರು ತಿಳಿಸಿದರು.

ಎನ್‌ಟಿಪಿಸಿಯ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜಜೆಯು ಬಹುತೇಕ ಜಖಂಗೊಂಡಿದೆ. ಅಲ್ಲದೆ, ರಿಷಿಗಂಗಾ ಜಲವಿದ್ಯುತ್ ಯೋಜನೆಯೂ ದಿಢೀರ್ ಪ್ರವಾಹದಿಂದ ತೀವ್ರಹಾನಿಗೆ ಒಳಗಾಗಿದೆ.

ಸುರಂಗ ಮಾರ್ಗದಲ್ಲಿ ಕೆಸರು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸುವ ಕಾರ್ಯದಲ್ಲಿ ರಕ್ಷಣಾ ತಂಡಗಳು ಕಾರ್ಯತತ್ಪರವಾಗಿವೆ. ಈ ಸುರಂಗ ಮಾರ್ಗದಲ್ಲಿ ಇನ್ನೂ 30 ಜನರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

TRENDING