Tuesday, April 13, 2021
Home ಜಿಲ್ಲೆ ಕೊಪ್ಪಳ ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಮಸೂದೆಗಳ ವಿರೋಧಿಸಿ ಜಾಥಾ...

ಇದೀಗ ಬಂದ ಸುದ್ದಿ

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಮಸೂದೆಗಳ ವಿರೋಧಿಸಿ ಜಾಥಾ…

ಕೇಂದ್ರ ಸರ್ಕಾರದ ಕಾರ್ಪೊರೇಟರ್ ಪರ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ರೈತರ ಆಗ್ರಹ ಜಾಥವನ್ನು ನಗರದ  ಲೇಬರ್ ಸರ್ಕಲ್ ನಲ್ಲಿ ಕೊಪ್ಪಳದ ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿಯವರು ಕೃಷಿ ಕಾಯ್ದೆಗಳ ಬಗ್ಗೆ ಕರಪತ್ರ ಹಂಚುವ ಮೂಲಕ ಉದ್ಘಾಟನೆ ಮಾಡಿದರು.  ಕಾಯ್ದೆಗಳ ಬಗ್ಗೆ ಮಾತನಾಡುತ್ತಾ ಆತ್ಮೀಯ ರೈತ ಬಾಂಧವರೇ , ಕೃಷಿಕಾರ್ಮಿಕ ಬಂಧುಗಳೇ ಹಾಗೂ ಯುವಜನರನ್ನು ಉದ್ದೇಶಿಸಿ

 ರೈತರು – ಕೃಷಿಕಾರ್ಮಿಕರು ಅತ್ಯಂತ ಅಪಾಯದ ದಿನಗಳನ್ನು ಎದುರಿಸುತ್ತಿದ್ದೇವೆ . ನಮ್ಮ ಬದುಕು ಘೋರ ನಿರಾಶೆಯ ಕೆಸರಿನಲ್ಲಿ ಸಿಲುಕಿದೆ . ಅದರಲ್ಲಿಯೇ ನರಳಿ ನರಳಿ ನಾವು ಹೆಣವಾಗುತ್ತಿದ್ದೇವೆ . ನಮ್ಮ ಬದುಕು ಕೊನೆಗೊಳ್ಳುತ್ತಿದೆ . ಹೀಗಿರುವಾಗ ಆಳುವ ಸರ್ಕಾರ ನಮ್ಮ ಆಸರೆಗೆ ಬರಬೇಕಿತ್ತು .

 ಈ ಹುದುಲಿನಿಂದ ನಮ್ಮನ್ನು ಹೊರತೆಗೆಯಬೇಕಿತ್ತು . ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಯಾವುದೇ ದಯೆದಾಕ್ಷಿಣ್ಯವಿಲ್ಲ ! ಅಂತೆಯೇ ಈ ಸರ್ಕಾರ ರೈತರ ವಿರುದ್ಧ ನಿರಂಕುಶವಾಗಿ ಮೂರು ಕರಾಳ ನೂತನ ಕಾನೂನುಗಳನ್ನು ಜಾರಿಗೆ ತಂದಿದೆ . ನಮ್ಮನ್ನು ಹೂತು ಸಮಾಧಿ ಮಾಡಲು ಸಜ್ಜಾಗಿದೆ ಎಂದರು. ಮುಂದುವರೆದು ಎಐಡಿವೈಒ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಉದ್ಬಾಳ್  ಮಾತನಾಡುತ್ತ ಸರ್ಕಾರದ ಜೀವವಿರೋಧಿ ನಿಲುವನ್ನು ದೇಶದ ರೈತರ , ಕೃಷಿಕಾರ್ಮಿಕರ ಮುಂಚೂಣಿ ಕ್ರಾಂತಿಕಾರಿ ಸಂಘಟನೆಯಾದ ಆಲ್ ಇಂಡಿಯಾ ಕಿಸಾನ್ ಖೇತ್ ಮದ್ದೂರ್ ಸಂಘಟನೆಗೆ ( ಎಐಕೆಕೆಎಮ್ ಎಸ್ ) ಸೇರ್ಪಡೆಯಾಗಿರುವ ರೈತ – ಕೃಷಿಕಾರ್ಮಿಕರ ಸಂಘಟನೆ ( ಆರ್‌ಕೆಎಸ್‌ ) ತೀವ್ರವಾಗಿ ಖಂಡಿಸಿದೆ .

ರೈತರ ಈ ಹೋರಾಟಕ್ಕೆ ಕ್ರಾಂತಿಕಾರಿ ಯುವಜನ ಸಂಘಟನೆಯಾದ ಎಐಡಿವೈಒ  ಸಂಪೂರ್ಣವಾಗಿ ಬೆಂಬಲಿಸುತ್ತದೆ . ಇದುವರೆಗೂ ಅಗತ್ಯ ವಸ್ತುಗಳ ಕಾಯ್ದೆ 1955 ರ ಪ್ರಕಾರ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡುವುದು ಅಪರಾಧವಾಗಿತ್ತು . ಆದರೆ ಇದೀಗ ಸರ್ಕಾರ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ 2020 ನ್ನು ಜಾರಿಗೆ ತಂದಿದೆ . ಈ ಕಾಯ್ದೆಯು ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ದಾಸ್ತಾನು ಮಾಡುವುದಕ್ಕೆ ಅವಕಾಶ ನೀಡುತ್ತದೆ , ಅಂದರೆ ಸಮಾಜದ್ರೋಹಿ ಕಾಳಸಂತೆಕೋರರಿಗೆ ಈ ಕಾಯ್ದೆ ರಕ್ಷಣೆ ನೀಡುತ್ತದೆ .

 ಮುಂಬರುವ ದಿನಗಳಲ್ಲಿ ಇವರು ಆಹಾರ ಪದಾರ್ಥಗಳ ಕೃತಕ ಅಭಾವ ಸೃಷ್ಟಿ ಮಾಡುತ್ತಾರೆ . ನಂತರ ತಮ್ಮ ಗೋಡೌನ್‌ಗಳಿಂದ ದಾಸ್ತಾನು ಬಿಡುಗಡೆ ಮಾಡಿ ಮನಸೋ ಇಚ್ಛೆ ಬೆಲೆ ಏರಿಸಿ ಜನತೆಯ ಸುಲಿಗೆ ಮಾಡುತ್ತಾರೆ ! ಎರಡನೆಯದಾಗಿ ಬೃಹತ್ ಉದ್ಯಮಿಗಳ ಮೋಸ ವಂಚನೆಯಿಂದ , ಲೇವಾದೇವಿ ಬಡ್ಡಿ ವ್ಯಾಪಾರಿಗಳ ಕಪಿ ಮುಷ್ಟಿಯಿಂದ ರೈತರನ್ನು ರಕ್ಷಿಸುತ್ತಿರುವ ಎಪಿಎಂಸಿ ಕಾಯ್ದೆಯನ್ನು ಅನೂರ್ಜಿತಗೊಳಿಸಿ ರೈತರ ಉತ್ಪನ್ನಗಳ ವಾಣಿಜ್ಯ ವ್ಯಾಪಾರ ಕಾಯ್ದೆಯನ್ನು ಜಾರಿಗೆ ತರಲಾಗಿದೆ .

ಅಂದರೆ ಈ ಕಾಯ್ದೆಯು ಸರ್ಕಾರಿ ಕೃಷಿ – ಮಂಡಿಗಳನ್ನು ( ಎಪಿಎಂಸಿ ) ನಾಶ ಮಾಡುತ್ತದೆ . ಉದ್ಯಮಿಗಳಿಗೆ ಖಾಸಗಿ ಮಂಡಿಗಳನ್ನು ತೆರೆಯಲು ಅವಕಾಶ ನೀಡುತ್ತದೆ . ಇದರಿಂದ ಬೆಳೆ ಮಾರಾಟದಲ್ಲಿ ರೈತರಿಗೆ ಲಭ್ಯವಿರುವ ಅಲ್ಪಸ್ವಲ್ಪ ರಕ್ಷಣೆಯೂ ಇನ್ನು ಮುಂದೆ ಇಲ್ಲವಾಗುತ್ತದೆ . ಉದ್ಯಮಿಗಳು ಬೆಳೆ ಖರೀದಿಯಲ್ಲಿ ರೈತರನ್ನು ವಂಚಿಸುವುದು ಮತ್ತೆ ಪ್ರಾರಂಭವಾಗುತ್ತದೆ . ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯವು ಇಲ್ಲದಂತಾಗುತ್ತದೆ . ಕಾರ್ಪೋರೇಟ್ ಕಂಪನಿಗಳ , ಬಹುರಾಷ್ಟ್ರೀಯ ಕಂಪನಿಗಳ ಮೋಸ , ಶೋಷಣೆಗೆ ರೈತರು ಬಲಿಯಾಗುತ್ತಾರೆ . ಇನ್ನೂ ಮೂರನೆಯದಾಗಿ ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿಸೇವೆಗಳ ಕುರಿತು ರೈತರ ಒಪ್ಪಂದ ಎಂದು ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ . ಇದರಿಂದ ಗುತ್ತಿಗೆ ಕೃಷಿಯ ಹೆಸರಿನಲ್ಲಿ ಕೃಷಿಯನ್ನು ಖಾಸಗಿ ಬೃಹತ್ ಕಂಪನಿಗಳ ನಿಯಂತ್ರಣಕ್ಕೆ ತರಲಾಗುತ್ತದೆ .

ರೈತರಿಂದ ಅವರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ . ಪರಿಣಾಮವಾಗಿ ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ ನಡೆದಾಡುವ ಹೆಣಗಳಾಗಿ ಬಿಡುತ್ತಾರೆ ಕೂಡಲೇ ರೈತ ವಿರೋಧಿ ಮೂರು ಮಸೂಧೆಗಳನ್ನು ಹಿಂಪಡೆಯಬೇಕು ಹಾಗೂ ವಿದ್ಯುತ್ ಮಸೂಧೆ 2020 ಕೈಬಿಡಬೇಕು,

ರೈತರ ಮೇಲೆ ಬರ್ಬರ ದಾಳಿ ಮಾಡಿದವರಿಗೆ ಉಗ್ರ ಶಿಕ್ಷೆ ನೀಡಬೇಕು ಸರ್ಕಾರಕ್ಕೆ ಆಗ್ರಹಿಸಿದರು. ಮುಂದುವರೆದು  ರೈತರ ಆಗ್ರಹ ಜಾಥಾ ಇರಕಲ್ಗಡ, ಬುಡಶೆಟ್ನಾಳ, ತಾಳ ಕನಕಪುರ,  ಕಿನ್ನಾಳ,  ಕಲಿಕೇರಿ,  ಅಬ್ಬಿಗೇರಿ ದನಕನದೊಡ್ಡಿ, ಕುಕುನಪಳ್ಳಿ ಇಂದ್ರಿಗಿ, ಬುದುಗುಂಪ,ಗುಡದಲ್ಲಿ, ಗಿಣಿಗೇರಿ  ಮುಂತಾದ ಹಳ್ಳಿಗಳಿಗೆ ಹೊರಟಿತು. ಈ ಜಾಥದಲ್ಲಿ ರೈತ ಸಂಘಟನೆಯ ಮುಖಂಡರಾದ ಹನುಮಂತಪ್ಪ,ಮಾಂತೇಶ್, ನಾಗರಾಜ್, ಶರಣಪ್ಪ, ಸಿದ್ದಪ್ಪ ಲೇಬಿಗೇರಿ, ಭಾಗವಹಿಸಿದ್ದರು.

ಎಐಡಿವೈಓ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ಜಿಲ್ಲಾ ಸಂಘಟನಾಕಾರರಾದ  ಶರಣು ಪಾಟೀಲ್ ಮುಖಂಡರಾದ  ರಮೇಶ ವಂಕಲಕುಂಟಿ , ದೇವರಾಜ್, ಹೊಸಮನಿ, ಭೀಮೇಶ್, ಮಂಜುಳಾ, ಮುಂತಾದವರು ಜಾಥಾದಲ್ಲಿ  ಉಪಸ್ಥಿತರಿದ್ದರು.

 ಮಂಜು ಬಿ ತೋಟಗೇರ್  

ವಿ  ನ್ಯೂಸ್ 24 ಕನ್ನಡ

ಕೊಪ್ಪಳ.

TRENDING