Saturday, April 17, 2021
Home ಅಂತರ್ ರಾಜ್ಯ ತಮಿಳುನಾಡು 'ಫೆ.14ರ ಈ ದಿನವನ್ನು ಯಾವೊಬ್ಬ ಭಾರತೀಯನೂ ಮರೆಯಲು ಸಾಧ್ಯವಿಲ್ಲ': ಪುಲ್ವಾಮಾ ಸೈನಿಕರಿಗೆ ಮೋದಿ ನಮನ

ಇದೀಗ ಬಂದ ಸುದ್ದಿ

‘ಫೆ.14ರ ಈ ದಿನವನ್ನು ಯಾವೊಬ್ಬ ಭಾರತೀಯನೂ ಮರೆಯಲು ಸಾಧ್ಯವಿಲ್ಲ’: ಪುಲ್ವಾಮಾ ಸೈನಿಕರಿಗೆ ಮೋದಿ ನಮನ

ಚೆನ್ನೈ: ಫೆಬ್ರವರಿ 14ರ ಈ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿ ನಡೆಯಿತು. ಆ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ನಮ್ಮ ಸೇನಾಪಡೆಯ ಮೇಲೆ ನಮಗೆ ಹೆಮ್ಮೆಯಿದೆ. ಸೈನಿಕರ ಶೌರ್ಯ, ಸಾಹಸ ತಲೆಮಾರುಗಳವರೆಗೆ ದೇಶದ ಜನತೆಗೆ ಅದರಲ್ಲೂ ಯುವಪಡೆಗೆ ಸ್ಪೂರ್ತಿದಾಯಕವಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಮೇಲೆ ನಡೆದ ಭಯೋತ್ಪಾದಕರ ಆತ್ಮಹತ್ಯಾ ದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ನಂತರ ಉಗ್ರರನ್ನು ಸದೆಬಡಿಯುವಲ್ಲಿ ಭಾರತೀಯ ಸೈನಿಕರು ತೋರಿಸಿದ ಧೈರ್ಯವನ್ನು ಮೆಚ್ಚುವಂಥಹದ್ದು ಎಂದು ಪ್ರಧಾನಿ ಮೋದಿ ಇಂದು ಚೆನ್ನೈಯಲ್ಲಿ ಅರ್ಜುನ್ ಯುದ್ಧ ಟ್ಯಾಂಕ್ ನ್ನು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

ತಮಿಳಿನ ಖ್ಯಾತ ಲೇಖಕ ಮತ್ತು ಕವಿ ಸುಬ್ರಹ್ಮಣ್ಯ ಭಾರತಿ ಅವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಿ, ಸುಬ್ರಹ್ಮಣ್ಯ ಭಾರತಿ ಅವರ ದೃಷ್ಟಿಕೋನದಿಂದ ಸ್ಪೂರ್ತಿ ಪಡೆದು ರಕ್ಷಣಾ ವಲಯದಲ್ಲಿ ಇಂದು ಭಾರತ ಸ್ವಾವಲಂಬಿಯಾಗಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದರು.

ನಾವು ಶಸ್ತ್ರಾಸ್ತ್ರಗಳನ್ನು ತಯಾರಿಸೋಣ, ಪೇಪರ್ ಗಳನ್ನು ತಯಾರಿಸೋಣ, ಫ್ಯಾಕ್ಟರಿಗಳನ್ನು ಮಾಡೋಣ, ಶಾಲೆಗಳು, ವಾಹನಗಳು, ಹಡಗು ನಿರ್ಮಿಸೋಣ, ಸ್ವಾವಲಂಬಿಗಳಾಗೋಣ ಎಂದು ಸುಬ್ರಹ್ಮಣ್ಯ ಭಾರತಿ ಹೇಳಿದ್ದರು. ಅವರ ಉಲ್ಲೇಖವನ್ನು ಪ್ರಧಾನಿ ನೆನಪು ಮಾಡಿಕೊಂಡರು.

ಎರಡು ರಕ್ಷಣಾ ಕಾರಿಡಾರ್ ಗಳಲ್ಲಿ ಒಂದು ತಮಿಳು ನಾಡಿನಲ್ಲಿದೆ. ಹೂಡಿಕೆಯ ಮೊತ್ತ ಅದಕ್ಕೆ 8 ಸಾವಿರದ 100 ಕೋಟಿ ರೂಪಾಯಿಯಾಗಿದೆ. ನಮ್ಮ ಗಡಿಗಳನ್ನು ಕಾಪಾಡಲು ಸೈನಿಕರಿಗೆ ಅಗತ್ಯವಾಗಿರುವ ಮತ್ತೊಂದು ಕಾರಿಡಾರನ್ನು ದೇಶಕ್ಕೆ ಸಮರ್ಪಿಸಲು ನನಗೆ ಇಂದು ಹೆಮ್ಮೆಯಾಗುತ್ತಿದೆ ಎಂದರು.

ಜಗತ್ತಿನಲ್ಲಿಯೇ ಅತ್ಯಂತ ಆಧುನಿಕ ಶಸ್ತ್ರಪಡೆಗಳನ್ನು ಹೊಂದಿದ ಸೇನಾಪಡೆಯನ್ನಾಗಿ ಭಾರತವನ್ನು ಮಾಡಲು ಸರ್ಕಾರ ಬದ್ಧವಾಗಿದ್ದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಅದರೊಟ್ಟಿಗೆ ರಕ್ಷಣಾ ವಲಯದಲ್ಲಿ ಅತ್ಯಂತ ವೇಗವಾಗಿ ಸ್ವಾವಲಂಬನೆ ಸಾಧಿಸಲು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

TRENDING